ಬೆಂಗಳೂರು: ಕೃಷ್ಣಾ ಮತ್ತು ಭೀಮಾ ಪ್ರವಾಹ ನಿಯಂತ್ರಣ ಮತ್ತು ಇತರ ನೀರಾವರಿ ವಿಚಾರಗಳ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿಗೆ ಆಗಮಿಸಿದ್ದ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ ಮತ್ತು ಅಧಿಕಾರಿಗಳು ಹಾಗೂ ರಾಜ್ಯ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ನಡೆಸಿದರು.
ಈ ಸಭೆಯಲ್ಲಿ ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿ ಪ್ರವಾಹ ನಿರ್ವಹಣೆಯ ಕುರಿತು ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಎರಡೂ ರಾಜ್ಯಗಳ ನಡುವೆ ಸಚಿವರು, ಕಾರ್ಯದರ್ಶಿಗಳ ಹಂತ ಹಾಗೂ ತಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ನಿರ್ವಹಿಸಲು ತೀರ್ಮಾನಿಸಲಾಯಿತು. ಎರಡೂ ರಾಜ್ಯಗಳ ನಡುವೆ ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳಲು ತೀರ್ಮಾನಿಸಲಾಯಿತು.
ದೂಧ್ ಗಂಗಾ ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸರಕಾರ ಒಪ್ಪಿಕೊಂಡಿದೆ. ಇದರಿಂದ ಈ ಭಾಗದ ಜನರ ನೀರಾವರಿ ಸೌಲಭ್ಯ ಹೊಂದುವ ಕನಸು ನನಸಾಗಲಿದೆ. ಅಲ್ಲದೇ, ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 4 ಟಿಎಂಸಿ ನೀರು ಬಿಡುಗಡೆ ಮಾಡಲಾಗುವುದು. ಅದೇ ರೀತಿ, ಮಳೆಗಾಲದಲ್ಲಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಇತರ ತಾಲೂಕಿನ ನಾನಾ ಭಾಗಗಳಿಗೆ 4 ಟಿಎಂಸಿ ನೀರನ್ನು ಕರ್ನಾಟಕ ಬಿಡಲಿದೆ. ಈ ಬಗ್ಗೆ ತಾಂತ್ರಿಕ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.