ವಿಜಯಪುರ: 2030 ರೊಳಗಾಗಿ ಭಾರತವನ್ನು ಮಲೇರಿಯಾ ಮುಕ್ತ ದೇಶವನ್ನಾಗಿಸೋಣ. ಈ ನಿಟ್ಟಿನಲ್ಲಿ ಮಾಧ್ಯಮದವರ ಪಾತ್ರ ಬಹು ಮುಖ್ಯವಾದದ್ದು ಎಂದು ವಿಜಯಪುರ ತಾಲೂಕು ಆರೋಗ್ಯಾಧಿಕಾರಿ ಕವಿತಾ ಕರೆ ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಮಲೇರಿಯಾ ಹಾಗೂ ಮಾಧ್ಯಮ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮದವರು ಹಗಲು-ರಾತ್ರಿ ಎನ್ನದೆ ಇಂಥ ಪರಿಸ್ಥಿತಿ ಮಧ್ಯೆ ಕೊರೊನಾ ನಿಯಂತ್ರಣ ಮಾಡುವಲ್ಲಿ ತುಂಬಾ ಶ್ರಮ ವಹಿಸುತ್ತಿದ್ದಾರೆ. ಮಾಧ್ಯಮಗಳ ಮೂಲಕ ಪ್ರತಿ ಗ್ರಾಮ, ಮನೆ-ಮನೆಗಳಲ್ಲಿ ಈ ರೋಗಗಳ ಲಕ್ಷಣಗಳ ಬಗ್ಗೆ, ಅದರ ಗುಣಪಡಿಸುವ ಕುರಿತು ಮನವರಿಕೆ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಹೆಚ್ಚು ತಿಳುವಳಿಕೆ ಬರುತ್ತದೆ. ಇದರಿಂದ ರೋಗ ಉಲ್ಬಣಿಸುವುದು ನಿಯಂತ್ರಿಸಲು ಒಂದು ಪ್ರಮುಖ ಅಂಗವಾಗಿ ಮಾಧ್ಯಮ ಕರ್ತವ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಪ್ರತಿಯೊಂದು ಗ್ರಾಮಗಳಲ್ಲಿ ಮಲೇರಿಯ ಕುರಿತು ಆರೋಗ್ಯ ಇಲಾಖೆ ಈಗಾಗಲೇ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಕೂಡ ತಮ್ಮ ಮನೆಯ ಸುತ್ತಲೂ ಸ್ವಚ್ಛವಾದ ವಾತಾವರಣ ಹೊಂದಿರಬೇಕು. ಎಲ್ಲೆಂದರಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟಬೇಕು. ಸೊಳ್ಳೆ ಪರದೆಗಳನ್ನು, ಸೊಳ್ಳೆಬತ್ತಿ ಹಾಗೂ ಮೈತುಂಬ ಬಟ್ಟೆ ಧರಿಸುವುದು ಸೂಕ್ತ ಎಂದು ಅವರು ಹೇಳಿದರು.
ಉಪ ಜಿಲ್ಲಾ ಶಿಕ್ಷಣ ಅಧಿಕಾರಿ ಡಾ. ಹಂಚಿನಾಳ ಮಾತನಾಡಿ, ನಮ್ಮ ಸುತ್ತಮುತ್ತಲೂ ಸಾವಿರಾರು ನಾನಾ ರೀತಿಯ ಸೊಳ್ಳೆಗಳಿರುತ್ತವೆ. ಅದರಲ್ಲಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವ ಮೂಲಕ ಮಲೇರಿಯಾ ರೋಗ ಲಕ್ಷಣಗಳು ಕಂಡುಬರುತ್ತವೆ. ಈ ರೋಗದಿಂದ ದಿನ ಬಿಟ್ಟು ದಿನ ಚಳಿ ಜ್ವರ ಬರುವುದು, ತಲೆನೋವು ಕಾಣಿಸಿಕೊಳ್ಳುವುದು, ಕೆಲವೊಮ್ಮೆ ವಿಶೇಷ ತೊಂದರೆಗಳು ಉಂಟಾಗಬಹುದು. ಅದು ಅಲ್ಲದೆ, ಮೆದುಳು ಮತ್ತು ಇತರೆ ಒಳ ಅಂಗಾಂಗಗಳಿಗೆ ಹರಡಿ ಮನುಷ್ಯನಿಗೆ ಮಾರಕವಾಗಬಹುದು. ಈ ರೋಗ ಸುಮಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಕುರಿತು ಮಾಧ್ಯಮದವರು ಹೆಚ್ಚು ಪ್ರಚಾರ ಮಾಡುವುದರಿಂದ ಜನಜಾಗೃತಿ ಮೂಡಿಸಿ ರೋಗ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಆರೋಗ್ಯಾಧಿಕಾರಿ ಡಾ. ಜೈಬುನ್ನಿನಾ ಬೀಳಗಿ ಮಾತನಾಡಿ, ಕೊರೊನಾ ನಿಯಂತ್ರಣ ಮಾಡುವಲ್ಲಿ ಮಹಾನಗರಪಾಲಿಕೆ ಹಾಗೂ ಮಾಧ್ಯಮ ಪಾತ್ರ ಬಹಳ ಮುಖ್ಯವಾಗಿದೆ. ಮಾಧ್ಯಮದವರು ಹೆಚ್ಚು ಪ್ರಚಾರ ಮಾಡುವುದರಿಂದ ಪ್ರತಿ ಮನೆ ಮನೆಗಳಿಗೆ ರೋಗ ನಿಯಂತ್ರಣಕ್ಕೆ ಒಂದು ಅಡಿಪಾಯ ಹಾಕಿದಂತಾಗಿದೆ ಎಂದು ಹೇಳಿದರು.
ಈ ಕಾರ್ಯಗಾರದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಆರ್. ಬಾಗವಾನ, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಯು. ಎಸ್. ಬೂದಿ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವಾನಂದ ಬೊಮ್ಮನಹಳ್ಳಿ, ಬಿ. ಪಿ. ಚಿಕ್ಕನಗೌಡರ, ಅರವಿಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.