ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ ಎಂದು ಸಿಎಂಗೆ ಭರವಸೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ

ವಿಜಯಪುರ: ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಅತೀವೃಷ್ಠಿ ಮತ್ತು ಪ್ರವಾಹ ನಿಯಂತ್ರಣ ಕುರಿತು ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬಿ. ಎಸ್. ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಈ ಸಭೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕೂಡ ಭಾಗಿಯಾಗಿದರು. ಸಂಭವನೀಯ ಪ್ರವಾಹ ಸಿದ್ಧತೆಗಳ ಬಗ್ಗೆ ಸಿಎಂ‌ ಯಡಿಯೂರಪ್ಪಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದರು.

ಸಿಎಂ ನಡೆಸಿದ ವಿಡಿಯೋ ಕಾನ್ಫರೆನ್ಸನಲ್ಲಿ ಚಾಮರಾಜನಗರದಿಂದ ಪಾಲ್ಗೋಂಡ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಜೊಲ್ಲೆ

ಚಾಮರಾಜನಗರದಿಂದ ಸಿಎಂ ಸಭೆಗೆ ಹಾಜರಾದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಕಳೆದ ಬಾರಿ ಮಹಾರಾಷ್ಟ್ರ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿತ್ತು ಎಂದು ಸಿಎಂ ಜೊತೆಗೆ ಮಾಹಿತಿ ಹಂಚಿಕೊಂಡರು. ಜಿಲ್ಲಾಧಿಕಾರಿ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ, ಈಗಾಗಲೇ ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವರು, ಪ್ರಮುಖರ ಜೊತೆಗೆ ಸಭೆ ಮಾಡಿದ್ದೇವೆ. ನೀರು ಬಿಡುವುದಕ್ಕೂ 48 ಗಂಟೆಗಳ ಮುಂಚಿತವಾಗಿ ತಿಳಿಸಲು ತಿಳಿಸಿದ್ದೇವೆ ಎಂದು ತಿಳಿಸಿದರು.

ಸಿಎಂ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೋಂಡ ವಿಜಯಪುರ ಜಿಲ್ಲಾಧಿಕಾರಿ, ಜಿ.ಪಂ. ಸಿಇಓ, ಎಸ್ಪಿ, ಇತರ ಅಧಿಕಾರಗಿಳು

ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವುದೇ ರೀತಿಯ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ. ಕಳೆದ ಬಾರಿ ಪ್ರವಾಹ ಎದುರಿಸಿದ ಮತ್ತು ನಿಭಾಯಿಸಿದ ಅನುಭವವಿದೆ ಎಂದು ತಿಳಿಸಿದರು. ಅಲ್ಲದೇ, ಕಾಳಜಿ ಕೇಂದ್ರ, ನೋಡಲ್ ಅಧಿಕಾರಿಗಳು, ಗ್ರಾ.ಮ ಪಂಚಾಯಿತಿ ಮಟ್ಟದಲ್ಲಿ ತಂಡ ರಚನೆ ಬಗ್ಗೆ ಮಾಹಿತಿ ನೀಡಿದರು.

ಕಳೆದ ಬಾರಿ ಸಂಪೂರ್ಣವಾಗಿ ಮುಳುಗಡೆಯಾಗಿದ್ದ ಸಿಂದಗಿ ತಾಲೂಕಿನ ತಾರಾಪುರ ಗ್ರಾಮದ ಸ್ಥಳಾಂತರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹೊಸ ಹಕ್ಕು ಪತ್ರ ಹಂಚಲಾಗಿದೆ. ತಾರಾಪುರ ಗ್ರಾಮದ ಎಲ್ಲ ಸಮಸ್ಯೆ ಬಗೆ ಹರಿಸಿದ್ದೀವಿ. ಗ್ರಾಮ ಸಂಪೂರ್ಣ ಸ್ಥಳಾಂತರಕ್ಕೆ ತಯಾರಿ ಕೂಡ ಮಾಡಿಕೊಂಡಿದ್ದೇವೆ ಎಂದು ಪಿ. ಸುನೀಲ ಕುಮಾರ ತಿಳಿಸಿದರು.

ಡೋಣಿ ನದಿ ಪ್ರವಾಹದ ಬಗ್ಗೆಯೂ ಗಮನ ಹರಿಸಿದ್ದೀವಿ ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಮುಂದಿನ ವಾರ ವಿಜಯಪುರ ಜಿಲ್ಲೆಯ ತಾರಾಪುರಕ್ಕೆ ಭೇಟಿ ನೀಡುವೆ. ಕಳೆದ ಬಾರಿ ಪ್ರವಾಹ ಉಂಟಾದಾಗ ತಾರಾಪುರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಸಮಸ್ಯೆಗಳನ್ನ ಬಗೆ ಹರಿಸಲು ಕ್ರಮ ಕೈಗೊಂಡಿದ್ದೇವೆ. ಈಗ ಒಂದು ಹಂತಕ್ಕೆ ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಸಿಇಓ ಗೋವಿಂದರೆಡ್ಡಿ, ಎಸ್ಪಿ ಅನುಪಮ ಅಗ್ರವಾಲ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಇಂಡಿ ಉಪವಿಭಾಧಿಕಾರಿ ರಾಹುಲ ಸಿಂಧೆ ಸೇರಿದಂತೆ ವಿಜಯಪುರ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌