ವಿಜಯಪುರ: ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಿದ್ದರೂ ವಿಜಯಪುರ ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಜಿಲ್ಲಾದ್ಯಂತ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಈ ಕುರಿತು ಬಸವ ನಾಡು ಕೂಡ ಕೆಲವು ಹೊತ್ತಿನ ಮುಂಚೆ ವರದಿ ಪ್ರಕಟ ಮಾಡಿತ್ತು.
ಇದೀಗ ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರತಿಕ್ರಿಯೆ ನೀಡಿದ್ದು, ವಿಜಯಪುರ ಜಿಲ್ಲೆಯಲ್ಲೂ ಅನಲಾಕ್ ಜಾರಿಯ ಬಗ್ಗೆ ನಾಳೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತಲೂ ಕಡಿಮೆ ಇದೆ. ಆದರೆ, ಯಾಕೆ ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಡಿಸಿಎಂ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದ್ದಾರೆ. ಅಲ್ಲದೇ, ತಾವು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೂ ಮಾತನಾಡಿದ್ದೇನೆ. ಅಷ್ಟೇ ಅಲ್ಲ, ಅನಲಾಕ್ ಮಾಡಲು ಅಗತ್ಯವಿರುವ ದಾಖಲೆಗಳನ್ನೂ ಉನ್ನತ ಅಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಂತೆ ವಿಜಯಪುರದಲ್ಲಿಯೂ ಅನಲಾಕ್ ಮಾಡುವ ಕುರಿತು ನಾಳೆ ನಿರ್ಧಾರ ನಿರೀಕ್ಷಿಸಲಾಗಿದೆ ಎಂದು ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.