ವಿಜಯಪುರ: ನಾಳೆ ಸೋಮವಾರದಿಂದ ವಿಜಯಪುರ ಜಿಲ್ಲೆಯಲ್ಲೂ ಬಸ್ ಸಂಚಾರ ಆರಂಭವಾಗಲಿವೆ. ಕೊರೊನಾ ಮಾರ್ಗಸೂಚಿಯನ್ವಯ ಸರಕಾರದ ಸೂಚನೆಯಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬಸ್ ಸಂಚಾರ ಆರಂಭವಾಗಲಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬುರ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ರಾಜ್ಯ ಸರಕಾರ ಜೂ.21ರ ಬೆ.6 ಗಂಟೆಯಿಂದ ಜು. 5ರ ಬೆ. 5 ಗಂಟೆಯವರೆಗೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರದ ಮಾರ್ಗಸೂಚಿಯಂತೆ ಆಸನ ಸಾಮರ್ಥ್ಯದ ಶೇ.50% ರಷ್ಟು ಮಾತ್ರ ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕರು ಮಾಸ್ಕನ್ನು ಕಟ್ಟುನಿಟ್ಟಾಗಿ ಧರಿಸತಕ್ಕದ್ದು ಹಾಗೂ ಕಡ್ಡಾಯವಾಗಿ ಮಾಸ್ಕ ಧರಿಸಿದವರಿಗೆ ಮಾತ್ರ ಬಸ್ಲಿನಲ್ಲಿ ಪ್ರವೇಶ ನೀಡಲು ನಿರ್ವಾಹಕರಿಗೆ ಸೂಚಿಸಲಾಗಿದೆ. ಬಸ್‌ಗಳನ್ನು ಘಟಕದಿಂದ ಮಾರ್ಗದ ಮೇಲೆ ಕಳುಹಿಸುವ ಮೊದಲು ಮತ್ತು ಬಂದ ನಂತರ ಕಡ್ಡಾಯವಾಗಿ ಸ್ಯಾನಿಟೈಜ್ ಮಾಡುಲಾಗುವುದು. ಎಲ್ಲಾ ಬಸ್ ನಿಲ್ದಾಣಗಳಲ್ಲಿ ಎಲ್ಲಾ ಘಟಕದ ಮತ್ತು ಎಲ್ಲಾ ವಿಭಾಗದ ವಾಹನಗಳಿಗೆ ಸ್ಯಾನಿಟೈಜ್ ಮಾಡುವುದು ಹಾಗೂ ಸ್ಯಾನಿಟೈಜ್ ಮಾಡಲು ಸಿಬ್ಬಂದಿಗಳಿಗೆ ಎರಡು ಪಾಳೆಯಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಬಸ್ಸಿನಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಬಸ್ ನಿಲ್ದಾಣಗಳಲ್ಲಿರುವ ಆಸನಗಳಿಗೆ ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಯಾಣಿಕರಿಗೆ ಸರತಿ ಸಾಲಿನಲ್ಲಿ ಬಸ್ಸಿನಲ್ಲಿ ಹತ್ತುವುದು ಮತ್ತು ಇಳಿಯಲು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಚಾಲನಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಮಾಸ್ಕ ಮತ್ತು ಕೈಗವಸು(ಹ್ಯಾಂಡ್ ಗ್ಲೌಸನ್ನು) ಧರಿಸುವುದು ಹಾಗೂ ಸ್ಯಾನಿಟೈಜರ್ ಬಳಸಿ, ಶುಚಿತ್ವವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಪ್ರಸ್ತುತ ಡಿಸೇಲ್ ದರ, ವಾಹನದ ಬಿಡಿ ಭಾಗಗಳ ಬೆಲೆ ಹೆಚ್ಚಳ, ಚಾಲನಾ ಸಿಬ್ಬಂದಿಗಳ ಕೊರತೆ ಮತ್ತು ಇತರೆ ವೆಚ್ಚಗಳನ್ನು ಗಮನದಲ್ಲಿರಿಸಿಕೊಂಡು ಅವಶ್ಯಕ ಸರತಿ ಅನುಸೂಚಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.
ವಿಭಾಗ ಮಟ್ಟದಲ್ಲಿ, ಅಂತರ ವಿಭಾಗ ಹಾಗೂ ಅಂತರ ನಿಗಮ ವ್ಯಾಪ್ತಿಯಲ್ಲಿ ಜನದಟ್ಟಣಿಗನುಗುಣವಾಗಿ ಅವಶ್ಯಕತೆಗೆ ತಕ್ಕಂತೆ ಮಾತ್ರ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವುದು ಹಾಗೂ ಅನಾವಶ್ಯಕವಾಗಿ ಯಾವುದೇ ಅನುಸೂಚಿಯಂತೆ ಕಾರ್ಯಾಚರಣೆ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅನುಸೂಚಿ ಮತ್ತು ಸರತಿಗಳನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್ ಓ ಪಿ ಪ್ರಕಾರ ಪ್ರಯಾಣಿಕರನ್ನು ನಿಗಧಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಕಾರ್ಯಾಚರಣೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಾಹನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದ್ದು, ಆಯಾ ರಾಜ್ಯಗಳ ಎಸ್ ಓ ಪಿ ಗಳನ್ನು ಪರಿಶೀಲಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾರ್ಯಾಚರಣೆ ಮಾಡಲಾಗುವುದು. ಆಯಾ ಜಿಲ್ಲಾಡಳಿತಗಳಿಂದ ಕಾಲಕಾಲಕ್ಕೆ ಜಾರಿಯಾಗುವ ನಿರ್ದೇಶನಗಳನ್ವಯ ಸಾರಿಗೆ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರಕಾರದ ಮಾರ್ಗಸೂಚಿಯಂತೆ ಮತ್ತು ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ಡಿ.ಕೊಟ್ರೆಪ್ಪ ಮತ್ತು ವಿಜಯಪುರ ವಿಭಾಗಿಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.