ವಿಜಯಪುರ ನಗರದಲ್ಲಿ ಇಂದು ಕೊರೊನಾ ಒಂದೂ ಹೊಸ ಕೇಸ್ ಇಲ್ಲ- ಪಾಸಿಟಿವಿಟಿ ದರವೂ ಇಂದು ಶೇ. 1ಕ್ಕಿಂತಲೂ ಕಡಿಮೆ- ಆದರೂ ಅನಲಾಕ್ ಯಾಕಿಲ್ಲ?

ವಿಜಯಪುರ: ಬಹಳ ತಿಂಗಳ ಬಳಿಕ ವಿಜಯಪುರ ನಗರದಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ಇಂದು ಒಂದೂ ಹೊಸ ಪ್ರಕರಣ ದಾಖಲಾಗಿಲ್ಲ. ಆದರೆ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿಯೇ ಅತೀ ಕಡಿಮೆ ಅಂದರೆ 23 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಒಂದು ವಾರದಿಂದ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗುತ್ತ ಸಾಗಿದೆ. ಒಟ್ಟು ನಡೆಸಲಾಗುವ ಪರೀಕ್ಷೆಗಳಲ್ಲಿ ಶೇ. 5 ಕ್ಕಿಂತಲೂ ಕಡಿಮೆ ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಒಂದು ಎಂಟು ದಿನಗಳಲ್ಲಿ ಜಿಲ್ಲೆಯಲ್ಲಿ ದಾಖಲಾದ ಹೊಸ ಪ್ರಕರಣಗಳು ಮತ್ತು ಶೇಕಡವಾರು ಪ್ರಮಾಣ ಇಂತಿದೆ

ದಿನಾಂಕ ಹೊಸ ಪ್ರಕರಣ ಪಾಸಿಟಿವಿಟಿ ದರ ಶೇ.
ಜೂ. 13 104 5.82
ಜೂ. 14 51 3.88
ಜೂ. 15 74 4.18
ಜೂ. 16 86 4.80
ಜೂ. 17 45 2.75
ಜೂ. 18 44 2.23
ಜೂ. 19 31 1.45
ಜೂ. 20 23 0.97

ವಿಜಯಪುರ ನಗರ(ಫೋಟೋ ಕೃಪೆ-ಅಶೋಕ ತಿಮಶೆಟ್ಟಿ)

ಲಾಕಡೌನ್ ಯಾಕಿಲ್ಲ?

ಈ ಮಧ್ಯೆ ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಒಟ್ಟು ಪರೀಕ್ಷೆಗಳಲ್ಲಿ ಶೇ. 5ಕ್ಕಿಂತಲೂ ಕಡಿಮೆ ಜನರಲ್ಲಿ ಕೊರೊನಾ ಸೋಂಕು ದೃಢಪಡುತ್ತಿದೆ. ಪಾಸಿಟಿವಿಟಿ ದರ ಇಂದು ಶೇ. 0.97ರಷ್ಟಿದೆ. ಅಲ್ಲದೇ, ದಿನೇ ದಿನೇ ಸೋಂಕಿತರ ಪ್ರಮಾಣವೂ ಕಡಿಮೆಯಾಗುತ್ತಿದೆ. ಇಂದು ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಹೊಸದಾಗಿ 23 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ವಿಜಯಪುರ ನಗರ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಚಡಚಣ, ಮುದ್ದೇಬಿಹಾಳ ತಾಳಿಕೋಟೆ ಮತ್ತು ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಇಂದು ಒಂದೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದಂತೆ ವಿಜಯಪುರ ಗ್ರಾಮೀಣ ಭಾಗದಲ್ಲಿ 6, ಬಬಲೇಶ್ವರ 2, ತಿಕೋಟಾ 4, ಇಂಡಿ 4 ಮತ್ತು ಸಿಂದಗಿ ತಾಲೂಕುಗಳಲ್ಲಿ 7 ಹೊಸ ಪ್ರಕರಣಗಳು ದೃಢಪಟ್ಟಿವೆ.

ವಿಜಯಪುರ ನಗರ(ಚಿತ್ರಕೃಪೆ- ಅಶೋಕ ತಿಮಶೆಟ್ಟಿ)

ಕಳೆದ ಎಂಟು ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ದಾಖಲಾದ ಕೊರೊನಾ ಸೋಂಕುಗಳ ಒಟ್ಟು ಸಂಖ್ಯೆ ಮತ್ತು ಪಾಸಿಟಿವಿಟಿ ಶೇಕಡವಾರು ದರ ಇಂತಿದೆ.

ಜೂ. 13 ರಂದು ಶೇ. 5.82, ಜೂ. 14 ರಂದು ಶೇ. 3.88, ಜೂ. 15 ರಂದು ಶೇ. 4.18, ಜೂ. 16 ರಂದು ಶೇ. 4.80, ಜೂ. 17 ರಂದು ಶೇ. 2.75, ಜೂ. 18 ರಂದು ಶೇ. 2.23, ಜೂ. 19 ರಂದು ಶೇ. 1.45 ಮತ್ತು ಜೂ. 20 ರಂದು ಶೇ. 0.97 ರಷ್ಟು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಅಂಕಿ-ಅಂಶಗಳನ್ನು ಪರಿಗಣಿಸಿದರೆ ರಾಜ್ಯ ಸರಕಾರ ಘೋಷಿಸಿರುವ 16 ಅನಲಾಕ್ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ಹೆಸರೂ ಸೇರಬೇಕಿತ್ತು. ಆದರೆ, ರಾಜ್ಯ ಸರಕಾರ ಕಳೆದ ವಾರಕ್ಕಿಂತಲೂ ಹಿಂದಿನ ಅಂಕಿ-ಅಂಶಗಳನ್ನು ಪರಿಗಣಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ವಿಜಯಪುರ ಜಿಲ್ಲಾಡಳಿತ ಸರಕಾರದ ಗಮನಕ್ಕೆ ತಂದಿದ್ದರೂ ಈಕ್ಷಣದ ವರೆಗೂ ಪ್ರಯೋಜನವಾಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು ಮೌನ

ಇದೇ ರೀತಿ ಅನಲಾಕ್ ಜಿಲ್ಲೆಗಳ ಪಟ್ಟಿಯಲ್ಲಿ ಇರದ ಧಾರವಾಡ ಜಿಲ್ಲೆಯಲ್ಲೂ ಪಾಸಿಟಿವಿಟಿ ದರ ಶೇ. 5 ಕ್ಕಿಂತಲೂ ಕಡಿಮೆ ಇತ್ತು. ಆದರೆ, ಅಲ್ಲಿನ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ನಿನ್ನೆಯಿಂದಲೇ ಸರಕಾರ ಮಟ್ಟದಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ಇಂದು ಸಂಜೆ ವೇಳೆಗೆ ಧಾರವಾಡ ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಿಸಲಾಗಿದೆ.

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ


ಈ ಕುರಿತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ. ಆವರು ವಿಜಯಪುರ ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಿಸಲು ಯಾವ ಪ್ರಯತ್ನ ಮಾಡುತ್ತಿದ್ದಾರೆ? ಅವರಿಗೆ ಈ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಎಂಬುದೂ ಗೊತ್ತಿಲ್ಲ.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಪ್ರಯತ್ನ

ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರನ್ನು ಪ್ರಶ್ನಿಸಿದಾಗ, ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ದರ ಶೇ. 5ಕ್ಕಿಂತಲೂ ಕಡಿಮೆ ಇದೆ. ಯಾವ ಕಾರಣದಿಂದ ವಿಜಯಪುರ ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೋ ಗೊತ್ತಿಲ್ಲ. ಆದರೂ, ಕೂಡ ತಾವು ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ತಾವು ಈ ಕುರಿತು ಡಿಸಿಎಂ ಗೋವಿಂದ ಕಾರಜೋಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೆ ಮಾತನಾಡಿದ್ದು, ಅಗತ್ಯ ಮಾಹಿತಿಯನ್ನು ನೀಡರುವುದಾಗಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌