ಅನಲಾಕ್ ಮಧ್ಯೆಯೂ ಬಸವ ನಾಡಿನಲ್ಲಿ ಬಸ್ ಸಂಚಾರ ಆರಂಭ- ಸಿಂಗರಿಸಿಕೊಂಡು ನಿಲ್ದಾಣಗಳಿಗೆ ಬಂದ ಬಸ್ಸುಗಳು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇದ್ದರೂ ಅನಲಾಕ್ ಮಾಡಿಲ್ಲ. ಅನಲಾಕ್ ಭಾಗ್ಯವಿಲ್ಲದಿದ್ದರೂ ವಿಜಯಪುರ ಜಿಲ್ಲಾದ್ಯಂತ ಬಸ್ ಸಂಚಾರ ಆರಂಭವಾಗಿದೆ.

ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿರುವ ಸಿಂಗಾರಗೊಂಡ ಬಸ್ಸುಗಳು

ಬೆಳಿಗ್ಗೆಯಿಂದಲೇ ಬಸ್ಸುಗಳ ಓಡಾಟ ಬಹಳ ದಿನಗಳ ನಂತರ ಪುನಾರಂಭವಾಗಿದ್ದು, ಪ್ರಯಾಣಿಕರೂ ಕೂಡ ಉತ್ಸಾಹದಿಂದಲೇ ಬಸ್ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ. ಆಗಮಿಸುತ್ತಿದ್ದಾರೆ. ವಿಜಯಪುರ ನಗರದಲ್ಲಿರುವ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಸೇವೆ ಬೆಳಿಗ್ಗೆ 6 ಗಂಟೆಯಿಂದಲೇ ಪುನಾರಂಭವಾಗಿದೆ.

ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸಿಂಗಾರಗೊಂಡು ನಿಂತಿರುವ ಬಸ್ಸು

ಲಾಕಡೌನ್ ನಂತರ ಬಸ್ಸುಗಳು ಸಂಚಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ಸುಗಳಿಗೆ ತಳಿರು ತೋರಣ, ಹೂವುಗಳೊಂದಿಗೆ ಅವುಗಳನ್ನು ಸಿಂಗರಿಸಲಾಗಿದೆ. ಸಿಬ್ಬಂದಿಗಳು ಬಸ್‌ಗಳನ್ನು ಸಿಂಗರಿಸಿಕೊಂಡು ನಿಲ್ದಾಣಕ್ಕೆ ತೆಗೆದುಕೊಂಡು ಬಂದಿದ್ದಾರೆ. ತೆಂಗಿನಗರಿ, ಹೂವಿನಿಂದ ಸಿಂಗರಿಸಿಕೊಂಡಿರುವ ಬಸ್ಸುಗಳು ನಿಲ್ದಾಣಗಳಲ್ಲಿ ಗಮನ ಸೆಳೆಯುತ್ತಿವೆ. ವಿಜಯಪುರ ಜಿಲ್ಲೆಯಿಂದ ರಾಜ್ಯದ ನಾನಾ ಭಾಗಗಳಿಗೆ ಬಸ್ ಸಂಚಾರ ಆರಂಭವಾಗಿದೆ.

ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಕಿರು

ಕೊರೊನಾ ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಎನ್ ಇ ಕೆ ಆರ್ ಟಿ ಸಿ ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸಿದ್ದು, ಈಗಾಗಲೇ ಸ್ಯಾನಿಟೈಸ್ ಮಾಡಿದೆ. ಸೀಟುಗಳ ಮೇಲೆ ಮಾರ್ಕ್ ಹಾಕಲಾಗಿದ್ದು, ಯಾವ ಸೀಟಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬಹುದು? ಯಾವ ಸೀಟಿನಲ್ಲಿ ಕುಳಿತುಕೊಳ್ಳಬಾರದು ಎಂದು ಮಾರ್ಕ್ ಹಾಕಲಾಗಿದೆ.

ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಗೆ ಹತ್ತುತ್ತಿರುವ ಪ್ರಯಾಣಿಕರು

ಪ್ರಯಾಣಿಕರು ಮಾಸ್ಕ್ ಧರಿಸಿಕೊಂಡು ಬಂದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಮಾರಾಟಕ್ಕೂ ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಬಸ್ ಚಾಲಕರು ಮತ್ತು ನಿರ್ವಾಹಕರು ಕೊರೊನಾ ಲಸಿಕೆ ಎರಡೂ ಡೋಸ್ ಹಾಕಿಸಿಕೊಂಡಿರುವ ಪ್ರಮಾಣ ಪತ್ರ ತಂದರೆ ಮತ್ತು ಒಂದು ಡೋಸ್ ಮಾತ್ರ ಹಾಕಿಸಿಕೊಂಡಿದ್ದರೆ ಆರ್ ಟಿ ಪಿ ಸಿ ಆರ್ ನೆಗೆಟಿವ್ ರಿಪೋರ್ಟ್ ತಂದರೆ ಮಾತ್ರ ಅವರಿಗೆ ಬಸ್ಸುಗಳನ್ನು ಓಡಿಸಲು ಮತ್ತು ಟಿಕೆಟ್ ನೀಡಲು ಅವಕಾಶ ನೀಡಲಾಗಿದೆ.

ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸುಗಳಲ್ಲಿ ಕುಳಿತಿರುವ ಪ್ರಯಾಣಿಕರು

ವಿಜಯಪುರ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು ಪ್ರಯಾಣಿಕರಲ್ಲಿ ಸಂತಸ ತಂದಿದ್ದು, ಹೀಗಾಗಿ ತಾವು ಬಸ್ಸುಗಳನ್ನು ಸಿಂಗರಿಸಿಕೊಂಡು ಬಂದಿರುವುದಾಗಿ ಚಾಲಕರು ತಿಳಿಸಿದ್ದಾರೆ.

ಮೊದಲ ದಿನ 650 ಬಸ್ಸುಗಳು ನಾನಾ ಮಾರ್ಗಗಳಲ್ಲಿ ಸಂಚಾರ ನಡೆಸಲಿದ್ದು, ಈಗಾಗಲೇ ಸುಮಾರು 100 ಬಸ್ಸುಗಳು ಓಡಾಟ ಆರಂಭಿಸಿವೆ. ವಿಜಯಪುರದಿಂದ ಬಾಗಲಕೋಟೆ, ಹುಬ್ಬಳ್ಳಿ, ಕಲಬುರಗಿ ಮತ್ತು ಮಹಾರಾಷ್ಟ್ರಗಳಿಗೆ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ ಎಂದು ಎನ್ ಇ ಕೆ ಆರ್ ಟಿ ಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌