ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕ್ರಮಕ್ಕೆ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಮೆಚ್ಚುಗೆ- 3ನೇ ಅಲೆ ತಡೆಯಲು ಸನ್ನದ್ಧರಾಗಿರಲು ಸೂಚನೆ

ವಿಜಯಪುರ: ಕೊರೊನಾ ನಿಯಂತ್ರಣಕ್ಕೆ ವಿಜಯಪುರ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರ(ಐಬಿ) ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕ್ರಮಗಳು ಮತ್ತು ಲಸಿಕಾಕರಣದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಂಭವನೀಯ 3ನೇ ಅಲೆಯ ಎದುರಿಸಲು ಸೂಕ್ತ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾರ್ಗದರ್ಶನದಲ್ಲಿ ಎಲ್ಲಾ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಂಭವನೀಯ 3ನೇ ಅಲೆಯನ್ನು ನಿಭಾಯಿಸಲು ಸೂಕ್ತ ಯೋಜನೆ ಮತ್ತು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ವಿಜಯಪುರ ಜಿಲ್ಲೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಮುಂದೆಯೂ ತಮ್ಮ ಅನುಭವದ ಆಧಾರದ ಮೇಲೆ ಸಮಸ್ಯೆಗಳು ಬರುವ ಮುಂಚೆಯೇ ಸೂಕ್ತ ಅಧ್ಯಯನದೊಂದಿಗೆ ಯೋಜನೆ ರೂಪಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಅವರು ಸೂಚನೆ ನೀಡಿದರು.

3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಆತಂಕವಿದೆ. ಇದಕ್ಕಾಗಿ ಸರ್ವ ರೀತಿಯಿಂದಲೂ ಸನ್ನದ್ದ ಗೊಳ್ಳಬೇಕು. ಮಕ್ಕಳು ದೇಶದ ಮುಂದಿನ ನಾಗರಿಕರಾಗಿರವುದರಿಂದ ವಿಶೇಷ ಗಮನ ನೀಡಬೇಕು. ಆರೋಗ್ಯ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಖಾಸಗಿ ಆಸ್ಪತ್ರೆಗಳ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ನಿಯಂತ್ರಣ ಕುರಿತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಪಲೋಕಾಯುಕ್ತರು ಸೂಚನೆ ನೀಡಿದರು.

ವಿಜಯಪುರದಲ್ಲಿ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆ

ಕ್ಷೇತ್ರ ಮಟ್ಟದಲ್ಲಿ ತಹಸೀಲ್ದಾರರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಪಿಡಿಓ ಮಟ್ಟದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ, ನಾಗರಿಕರಲ್ಲಿ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಈವರೆಗೆ ಕರೋನಾ ನಿಯಂತ್ರಣಕ್ಕಾಗಿ ಅತ್ಯುತ್ತಮ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲಾ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮೂಲಕ ಅಮೂಲ್ಯ ಜೀವ ಉಳಿಸುವ ಕಾರ್ಯ ಸಹ ಆಗಿದೆ. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ಕೊರೊನಾ ನಿಯಂತ್ರಣಕ್ಕಾಗಿ ಸರಕಾರದ ಮಟ್ಟದಲ್ಲಿ ಮೂಲಸೌಕರ್ಯ ಪೂರೈಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸಿದರೆ ಅದರ ಪ್ರತಿಯನ್ನು ತಮಗೆ ಸಲ್ಲಿಸುವಂತೆ ತಿಳಿಸಿದ ಅವರು ಜಿಲ್ಲಾಡಳಿತಕ್ಕೆ ಸೂಕ್ತ ಸಹಾಯ, ಸಹಕಾರವನ್ನು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಒದಗಿಸಿ ಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕರೋನ ನಂತರ ಬ್ಲ್ಯಾಕ್ ಪಂಗಸ್ ರೋಗಿಗಳ ಮತ್ತು ಲಸಿಕಾ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಪಡೆದ ಅವರು ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಈಗಿನಿಂದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ವೆಂಟಿಲೇಟರ್ ಗಳ ಬಗ್ಗೆಯೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳ ಭವಿಷ್ಯಕ್ಕೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಪಿ ಸುನಿಲ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 3.42 ಲಕ್ಷ ಜನರು ಕೊರೊನಾ ಲಸಿಕೆಗಳನ್ನು ಪಡೆದಿದ್ದಾರೆ. ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಸೇರಿದಂತೆ ನಾನಾ ವರ್ಗಗಳ 18 ರಿಂದ 44 ವಯೋಮಾನದವರಿಗೆ ಲಸಿಕಾ ಮೇಳ ಅಂಗವಾಗಿ ಇಂದು 20 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 31 ಸಾವಿರ ಲಸಿಕೆಗಳು ಜಿಲ್ಲಾಡಳಿತದ ಬಳಿಯಿದ್ದು, ಯೋಜನೆ ಪ್ರಕಾರ ಲಸಿಕೆ ನೀಡಲಾಗುತ್ತಿದೆ. ಅದರಂತೆ ಜಿಲ್ಲಾ ಜಿಲ್ಲಾದ್ಯಂತ ಕಾರ್ಯಪಡೆಗಳನ್ನು ರಚಿಸಿ ಗ್ರಾಮೀಣ ಜನತೆಯಲ್ಲಿ ನಿಯಂತ್ರಣ ಕುರಿತು ಅರಿವು ಮೂಡಿಸುವ ಜೊತೆಗೆ ಸೂಕ್ತ ಚಿಕಿತ್ಸೆ ಸಹ ಒದಗಿಸಿ ಕೊಡಲಾಗಿದೆ. ಆಕ್ಸಿಜನ್ ಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದೆ. ಪ್ರತಿನಿತ್ಯ ಜಿಲ್ಲಾಸ್ಪತ್ರೆ, ನಾನಾ ಆಸ್ಪತ್ರೆ ಹಾಗೂ ಗ್ರಾಮದಲ್ಲಿ ಖುದ್ದಾಗಿ ಭೇಟಿ ನೀಡಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾ 3ನೇ ಅಲೆ ನಿಭಾಯಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾರ್ಯಪಡೆಗಳನ್ನು ರಚಿಸಿ ಸೂಕ್ತ ತಿಳವಳಿಕೆ ನೀಡಲಾಗಿದೆ. ಕೊರೊನಾ ಸೋಂಕಿನ ಲಕ್ಷಣ ಹೊಂದಿದವರಿಗೆ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಅವಶ್ಯಕ ಕ್ರಮಳ್ಳಲಾಗಿದೆ. ಈಗಾಗಲೇ ಪ್ರತಿ ಮನೆಗೆ ಮೂರು ಬಾರಿ ತೆರಳಿ ಕಾರ್ಯಪಡೆಗಳು ಸೂಕ್ತ ತಿಳುವಳಿಕೆ ನೀಡಿದ್ದು, ಗ್ರಾಮ ಮಟ್ಟದಲ್ಲಿ ಆಹಾರ ಕಿಟ್ ಗಳನ್ನು ಸಹ ವಿತರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಎಸ್ಪಿ ಅನುಪಮ ಅಗರವಾಲ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಮಹಾನಗರಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಾಪಸೆ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ಸಂಪತಕುಮಾರ ಗುಣಾರಿ, ಡಾ. ಮಲ್ಲನಗೌಡ ಬಿರಾದಾರ, ಡಾ. ಲಕ್ಕಣ್ಣವರ, ಡಾ. ಮಹೇಶ ನಾಗರಬೆಟ್ಟ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌