ಬಬಲೇಶ್ವರ ಮತಕ್ಷೇತ್ರದಲ್ಲಿ ಗುತ್ತಿಗೆದಾರರು ಗುಣಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವಂತೆ ಶಾಸಕ ಎಂ. ಬಿ. ಪಾಟೀಲ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನಾ ಇಲಾಖೆಗಳ ಕಾಮಗಾರಿಗಳು ಬರದಿಂದ ಸಾಗಿವೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಸೂಚನೆ ನೀಡಿದ್ದಾರೆ‌‌.

ಅರಕೆರಿ ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಬಲೇಶ್ವರ ಮತಕ್ಷೇತ್ರಾದ್ಯಂತ ಈಗಾಗಲೇ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆಗಳು ಸೇರಿದಂತೆ ನಾನಾ ಇಲಾಖೆಗಳ ಕಾಮಗಾರಿಗಳು ಬರದಿಂದ ಸಾಗಿವೆ. ನಮ್ಮ ಕ್ಷೇತ್ರದಲ್ಲಿ ಯಾವಾಗಲೂ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದು, ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅರಕೇರಿ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ನೆಟ್ಟ ಒಂದು ಸಾವಿರ ಸಸಿಗಳ ಪೋಷಣೆಗಾಗಿ ಎರಡು ಬೋರವೆಲ್‍ಗಳನ್ನು ಕೋಟಿ ವೃಕ್ಷ ಅಭಿಯಾನದಡಿ ಕೊರೆಯಿಸುವುದಾಗಿ ತಿಳಿಸಿದ ಅವರು, ಕೊವಿಡ್ ಕಾಯಿಲೆಯಿಂದಾಗಿ ಸತತ ಎರಡು ವರ್ಷಗಳ ಕಾಲ ಶಾಲೆ ಪ್ರಾರಂಭವಾಗದೇ ಮಕ್ಕಳ ಕಲಿಕೆಯಲ್ಲಿ ಹಿನ್ನೆಡೆ ಉಂಟಾಗಿತ್ತು. ಕಾಯಿಲೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಶಾಲೆಗಳನ್ನು ಪುನಾರಂಭಿಸಲಾಗುವುದು ಎಂದು ಸರಕಾರ ತಿಳಿಸಿದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಸ್ವಚ್ಚತೆ, ಸಾಮಾಜಿಕ ಅಂತರ ಕಾಪಾಡುವದು, ಮಾಸ್ಕ್ ಮತ್ತು ಸೈನಿಟೈಸರ್ ಬಳಕೆ ಬಗ್ಗೆ ತಿಳಿಸಬೇಕು ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎಸ್. ಹತ್ತಳ್ಳಿ, ಮುಖಂಡರಾದ ಸಿದ್ದಣ್ಣ ಸಕ್ರಿ, ಅಶೋಕ ದಳವಾಯಿ, ಚನ್ನಪ್ಪ ದಳವಾಯಿ, ಪೀರಪಟೇಲ ಪಾಟೀಲ, ಗ್ರಾ. ಪಂ. ಅಧ್ಯಕ್ಷೆ ದೊಂಡಿಬಾಯಿ ರಾಠೋಡ, ಸುರೇಶ ಭಂಡಾರಿ, ನಿಂಗರಾಜ ಬೆಳ್ಳುಬ್ಬಿ, ಹುಸೇನಸಾಬ ಮನಗೂಳಿ, ಬಿ. ಎ. ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌