ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಳಿ ಚಿಕ್ಕಗಲಜಗಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ನೂತನ ಜಾಕೆಟಿಂಗ್ ತಂತ್ರಜ್ಞಾನದ ಬ್ಯಾರೇಜ್ ಈಗ ಭರ್ತಿಯಾಗಿದ್ದು, ನೀರು ತುಂಬಿ ಹರಿಯುತ್ತಿದೆ.
ಈ ಬ್ಯಾರೇಜಿನ ಸುತ್ತಲಿನ ನಾನಾ ಹಳ್ಳಿಗಳ ರೈತರಿಂದ ಜೂ.23 ರಂದು ಬುಧವಾರ ಬುಧವಾರ ಗಂಗಾಪೂಜೆ ಮತ್ತು ಬಾಗೀನ ಕಾರ್ಯಕ್ರಮ ಆಯೋಜಿಸಿದ್ದಾರೆ. ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಅನುಕೂಲವಾಗಲು ನೂತನ ತಂತ್ರಜ್ಞಾನ ಬಳಸಿ, ಹಾಲಿ ಇದ್ದ ಬ್ಯಾರೇಜ್‍ನ್ನು ಬಲಪಡಿಸಿ, ಎತ್ತರಿಸುವ ಕಾಮಗಾರಿಗೆ ಹೆಚ್ಚಿನ ಮುತುವರ್ಜಿ ವಹಿಸಿ, ಚಾಲನೆ ನೀಡಿದ್ದರು.
ಈ ಕಾಮಗಾರಿಗೆ ರೂ. 54 ಕೋ. ವೆಚ್ಚವಾಗಿದ್ದು, ಈಗ ಹಿಪ್ಪರಗಿ ಆಣೆಕಟ್ಟಿನಿಂದ ನೀರು ಬಿಟ್ಟಿದ್ದರಿಂದ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಇದೇ ಮೊದಲ ಬಾರಿಗೆ ನೀರು ತುಂಬಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಗಂಗಾಪೂಜೆಯನ್ನು ಏರ್ಪಡಿಸಿದ್ದಾರೆ. ಬ್ಯಾರೇಜ್ ರೂವಾರಿ, ಮಾಜಿ ಸಚಿವ ಹಾಗೂ ಈ ಭಾಗದ ಶಾಸಕರಾದ ಎಂ. ಬಿ. ಪಾಟೀಲ ಅವರು ಈ ಬ್ಯಾರೇಜೊಗೆ ಗಂಗಾಪೂಜೆ ನೆರವೇರಿಸಲಿದ್ದಾರೆ ಎಂದು ಆ ಭಾಗದ ರೈತರ ಪರವಾಗಿ ಹಿರಿಯ ಸಹಕಾರಿ ಧುಈಣ ಎಚ್. ಎಸ್. ಕೋರಡ್ಡಿ ತಿಳಿಸಿದ್ದಾರೆ.
ಕೊರೊನಾ ಮಾರ್ಗಸೂಚಿ ಪಾಲಿಸಿ ಈ ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಳ್ಳಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.