ವಿಜಯಪುರ: ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಮತ್ತೆ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಕಾರ್ಯಕ್ರಮಗಳು ಕೇವಲ ಸಮಾರಂಭಗಳಿಗೆ ಸೀಮಿತವಾಗದೇ ತಮ್ಮ ಮತಕ್ಷೇತ್ರದ ಜನರಲ್ಲಿ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕಡೆಗೂ ಶಾಸಕರು ಗಮನ ಹರಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಶಾಸಕರ ಸಲಹೆ
ದೇಶದ ನೂರು ಕೋಟಿ ಜನರು ಹಾಗೂ ನಮ್ಮ ರಾಜ್ಯದಲ್ಲಿ ಐದು ಕೋಟಿ ಜನರು ಲಸಿಕೆ ಹಾಕಿಸಿಕೊಂಡರೆ ಮಾತ್ರ ಕೊರೊನಾ ಮಹಾಮಾರಿಯ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ರೂ. 25 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕೊರೊನಾ ಸೋಂಕು ಹರಡುವುದನ್ನು ತಡಗಟ್ಟಬೇಕೆಂದರೆ ನಾವೆಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ಅನಾಹುತಗಳಿಗೆ ಜನರೇ ಕಾರಣರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊರೊನಾ ಮೊದಲನೇ ಅಲೆಗಿಂತ ಎರಡನೇ ಅಲೆಯು ಯುವಕರಿಗೆ ಹೆಚ್ಚು, ಹೆಚ್ಚು ಹಾನಿ ಉಂಟು ಮಾಡಿದೆ. ಕೊರೊನಾ ಮೂರನೇ ಅಲೆ ಮಕ್ಕಳಿಗೆ ಬರುವ ಸಾಧ್ಯತೆ ಇದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೆ ಅದರಿನಂದ ನಮ್ಮ ಮನಸ್ಸಿಗೆ ನೋವಾಗುತ್ತದೆ. ಅದಕ್ಕಾಗಿ ನಾವೇಲ್ಲರೂ ಮುಂಜಾಗೃತೆ ವಹಿಸಬೇಕು. ಸರಕಾರ ರೂಪಿಸಿದ ಎಲ್ಲ ಸುರಕ್ಷಾ ಕ್ರಮಗಳನ್ನು ಪಾಲಿಸಿ ಕೊರೊನಾ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸೋಣ ಎಂದು ಎಂ. ಬಿ. ಪಾಟೀಲ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಜಿಲ್ಲಾ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ವಿಜಯಪುರ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಕಾಂಗ್ರೆಸ್ ಮಹಿಳಾ ಘಟಕ ಪದಾಧಿಕಾರಿ ಶ್ರೀದೇವಿ ಉತ್ಲಾಸರ, ಪಿಡಿಓ ಗೀತಾ ಕಲ್ಲವ್ವಗೋಳ, ಮುಖಂಡರಾದ ಪಾಂಡು ಜಾಧವ, ಪರಶುರಾಮ ಮಲಘಾಣ, ಭೀಮಶಿ ಆಸಂಗಿ, ಆನಂದ ನ್ಯಾಮಗೌಡ, ಅಖಂಡ ತಳೆವಾಡ, ಶಿವಯ್ಯ ಒಡೆಯರ, ದಶರಥ ಕಾರಜೋಳ, ಪೋಮು ಜಾಧವ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಕೇಂದ್ರ ಬಬಲೇಶ್ವರಕ್ಕೆ ಭೇಟಿ ನೀಡಿದ ಎಂ. ಬಿ. ಪಾಟೀಲ ಅವರು, ವೈ ಜಂಕ್ಷನ್ ಮತ್ತು ಶಾಂತವೀರ ವೃತ್ತ, ಗಾಂಧಿ ವೃತ್ತದಿಂದ ಹ್ಯಾಳಕಟ್ಟಿವರೆಗೆ ಸಿಸಿ ರಸ್ತೆ ಕಾಮಗಾರಿ ಹಾಗೂ ಮಿನಿ ವಿಧಾನಸೌಧ ನಿವೇಶನದ ಪರಿವೀಕ್ಷಣೆ ನಡೆಸಿದರು. ಅಲ್ಲದೇ, ಬಬಲೇಶ್ವರದ ಪಟ್ಟಣ ಪಂಚಾಯಿತಿ ನೂತನ ಕಾರ್ಯಾಲಯ ಉದ್ಘಾಟಿಸಿದರು.
ನಂತರ ಮಮದಾಪುರದಲ್ಲಿ ರೂ. 50 ಲಕ್ಷ ವೆಚ್ಚದ ಅಂಬೇಡ್ಕರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ರೂ. 1.06 ಕೋ. ವೆಚ್ಚದ ಹೊಸಜೈನಾಪುರ-ಹಳೆಬೆಳ್ಳುಬ್ಬಿ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕಂಬಾಗಿ ಗ್ರಾಮದ ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಕಂಬಾಗಿ 110 ಕೆವಿ ವಿದ್ಯುತ್ ಸ್ಟೇಷನ ನಿರ್ಮಾಣಕ್ಕೆ ನಿಯೋಜಿತ ಸ್ಥಳವನ್ನು ಪರಿಶೀಲನೆ ನಡೆಸಿದರು.