ವಿಜಯಪುರ: ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ವಿಜಯಪುರ ಜಿಲ್ಲೆಯ ಭೀಮಾ ತೀರದಲ್ಲಿ ಅಣಕು ಪ್ರದರ್ಶನ ನಡೆಯಿತು.
ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಬಳಿ ಭೀಮಾ ನದಿಯಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ಉಸ್ತುವಾರಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ ನಡೆಯಿತು. ದೇವಣಗಾಂವ ಗ್ರಾ. ಪಂ. ಮಟ್ಟದ ವಿಪತ್ತು ನಿರ್ವಹಣಾ ಯೋಜನಾ ಸಮಿತಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ನೀಡುವ ಜೊತೆಗೆ ತಾವರಖೇಡ ಗ್ರಾಮದಲ್ಲಿ ದೋಣಿ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅಣಕು ಪ್ರದರ್ಶನ ನಡೆಸಲಾಯಿತು.
ಇಂಡಿ ಉಪವಿಭಾಗಾಧಿಕಾರಿ ಡಾ, ರಾಹುಲ್ ಸಿಂಧೆ ಇವರ ನೇತೃತ್ವದಲ್ಲಿ ಸಿಂದಗಿ ತಹಸೀಲ್ದಾರ ಸಂಜೀವ ದಾಸರ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ, ಹೋಂ ಗಾರ್ಡ್ಸ್ ಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಮಕ್ಷಮ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಣಗಾಂವ ಮತ್ತು ತಾವರಖೇಡ ಗ್ರಾ. ಪಂ. ಮಟ್ಟದ ವಿಪತ್ತು ನಿರ್ವಹಣಾ ಯೋಜನಾ ಸಮಿತಿಯಲ್ಲಿರುವ ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಳೆದ ವರ್ಷ ಭೀಮಾ ನದಿ ಪ್ರವಾಹದಿಂದಾಗಿ ವಿಜಯಪುರ ಜಿಲ್ಲೆಯ ಹತ್ತಾರು ಗ್ರಾಮಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಆದರೆ, ಈ ಬಾರಿ ವಿಜಯಪುರ ಜಿಲ್ಲಾಡಳಿತ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಈಗಲೇ ಸಿದ್ಧತೆ ಕೈಗೊಂಡಿದ್ದು, ಒಂದು ವೇಳೆ ಭೀಮಾ ನದಿಯಲ್ಲಿ ಪ್ರವಾಹ ಉಂಟಾದರೆ ಏನೆಲ್ಲ ಮಾಡಬೇಕು ಎಂಬುದನ್ನು ಈ ಅಣಕು ಪ್ರದರ್ಶನದ ಮೂಲಕ ತೋರಿಸಿ ಕೊಡಲಾಯಿತು. ಅಲ್ಲದೇ, ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಜಿಲ್ಲಾಡಳಿತ ಎದುರಿಸಲಿದೆ ಎಂಬುದನ್ನು ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.