ವಿಜಯಪುರ: ಕೊರೊನಾ ಸಂಕಷ್ಟ ಸಮಯಮದಲ್ಲಿ ತಮ್ಮವರನ್ನು ಕಳೆದುಕೊಂಡರೂ ಅಂತ್ಯಕ್ರಿಯೆ, ಅಸ್ತಿವಿರ್ಜನೆಗೂ ಮುಂದಾಗದ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದೆ ಇರುವಾಗ ಮೂಕ ಪ್ರಾಣಿಯ ಈ ಘಟನೆ ಎಂಥವರ ಕಣ್ಣಂಚಿನಲ್ಲೂ ನೀರು ತರಿಸುವಂತಿದೆ.
ಇದು ಮಾೃತಹೃದಯಕ್ಕೆ ಪ್ರತ್ಯಕ್ಷ ಸಾಕ್ಷಿ. ತಾಯಿ ಕರಳು ಎಂಥದ್ದೂ ಎಂಬುದಕ್ಕೆ ತಾಜಾ ಉದಾಹರಣೆ. ಕರುಳ ಕುಡಿಯನ್ನು ಕಳೆದುಕೊಂಡ ತಾಯಿ ಕುದುರೆಯೊಂದು ಅದರ ಕಳೆಬರದ ಎದುರು ಐದಾರು ಗಂಟೆ ಸತತವಾಗಿ ನಿಂತು ರೋಧಿಸಿದ ಹೃದಯ ವಿದ್ರಾವಕ ಘಟನೆಯಿದು.
ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ. ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಮರಿಯೊಂದು ಸಾವನ್ನಪ್ಪಿದೆ. ಬೆಳಿಗ್ಗೆ ಘಟನೆ ನಡೆದರೂ ಮಧ್ಯಾಹ್ನದವರೆಗೂ ಐದಾರೂ ಗಂಟೆಗಳ ಕಾಲ ತಾಯಿ ಕುದುರೆ ಮಾತ್ರ ತನ್ನ ಮರಿಯ ಕಳೆಬರದ ಬಳಿಯೇ ನಿಂತು ರೋಧಿಸಿದೆ.
ಕುದುರೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದವು. ಆಗ ವೇಗವಾಗಿ ಬಂದ ಅಪರಿಚಿತ ವಾಹನವೊಂದು ರಸ್ತೆಗೆ ಅಡ್ಡಲಾಗಿ ಬಂದ ಕುದುರೆ ಹಿಂಡಿನಲ್ಲಿದ್ದ ಮರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮರಿ ಕುದುರೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿ ಕುದುರೆ ಘಟನಾ ಸ್ಥಳದಿಂದ ಕದಲದೆ ಅದೇ ಸ್ಥಳದಲ್ಲಿಯೇ ನಿಂತಿದ್ದು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಗಮನ ಸೆಳೆದಿದೆ. ಮರಿಯನ್ನು ಕಳೆದುಕೊಂಡ ಆ ತಾಯಿ ಕುದುರೆಗೆ ತನ್ನ ದುಃಖವನ್ನು ತೋಡಿಕೊಳ್ಳಲು ಆಗದೆ ಮೂಕವೇದನ ಅನುಭವಿಸಿದೆ.
ಬೆಳಿಗ್ಗೆ ಘಟನೆ ನಡೆದ ಸ್ಥಳದ ಬಳಿ ಹೊರಟಿದ್ದ ಖಾಸಗಿ ಶಾಲೆಯ ಶಿಕ್ಷಕ ಜಗದೀಶ ಸಾಲಳ್ಳಿ ಅಶ್ವಧಾರೆಯ ಈ ಘಟನೆಯನ್ನು ನೋಡಿದ್ದಾರೆ. ಸ್ಥಳೀಯರ ಸಹಾಯದಿಂದ ಸಾವಿಗೀಡಾದ ಕುದುರೆ ಮರಿಯನ್ನು ರಸ್ತೆ ಬದಿಗೆ ಸರಿಸಿದ್ದಾರೆ. ಆದರೂ ಸಹ ರಸ್ತೆ ಪಕ್ಕದಲ್ಲಿ ಬಿದ್ದಿರುವ ಮರಿ ಕುದುರೆಯ ಕಳೆಬರಹದ ಎದುರು ನಿಂತ ಜಾಗದಲ್ಲೇ ನಿಂತಿರುವುದು ಎಂಥವರ ಹೃದಯವ್ನೂ ಮಿಡಿದಿದೆ. ನಾಗರಿಕ ಸಮಾಜದಲ್ಲೇ ಮಾನವೀಯತೆ ಕಡಿಮೆ ಆಗುತ್ತಿರುವ ಇಂಥ ಸಂದರ್ಭದಲ್ಲಿ ಮೂಕ ಪ್ರಾಣಿಯ ಕುರುಳಿನ ಕೂಗು ಹೃದಯಸ್ಪರ್ಶಿಯಾಗಿತ್ತು.