ಹಾವೇರಿ: ಕೊರೊನಾ ಮೂರನೇ ಅಲೆ ತಡೆಗಟ್ಟಲು ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮ ಹಾವೇರಿಯಲ್ಲಿ ಆರಂಭವಾಗಿದೆ.
ಕೊರೊನಾ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿ ಹಾವೇರಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಹಾವೇರಿ ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಕ್ಕಳ ಆರೋಗ್ಯ ತಪಾಸಣೆ ಆರಂಭವಾಗಿದ್ದು, ಮೂರನೇ ಅಲೆಯ ಪರಿಣಾಮ ಕ್ಷೀಣಿಸುವವರೆಗೂ ಮಕ್ಕಳಿಗೆ ಎಲ್ಲ ರೀತಿಯ ಅಗತ್ಯ ವೈದ್ಯಕೀಯ ಉಪಚಾರ ಹಾಗೂ ಪೌಷ್ಠಿಕಾಂಶದ ಆಹಾರ ಒದಗಿಸಲಾಗುವುದು. ಒಟ್ಟಾರೆ ಮಖ್ಳ ಆರೋಗ್ಯವನ್ನು ಸದೃಢ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಜೂ. 25 ರಿಂದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಆರಂಭವಾಗಲಿದೆ. ಜು. 30 ರೊಳಗಾಗಿ ಜಿಲ್ಲೆಯ 16 ವರ್ಷದೊಳಗಿನ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣವಾಗಲಿದೆ. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಪಾಲಕರಿಗೂ ಆರೋಗ್ಯ ತಪಾಸಣೆ ಹಾಗೂ ಕೊರೊನಾ ವ್ಯಾಕ್ಸಿನ್ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಿಗೆ ಆರೋಗ್ಯದ ರಕ್ಷಣೆ ಮಾಡಲು ಈ ಯೋಜನೆಯಿಂದ ಆರೋಗ್ಯದ ರಕ್ಷಾ ಕವಚದಂತೆ ಈ ಶಿಬಿರವನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು ಇನ್ನೂ ನಿರ್ಧಾರವಾಗಿಲ್ಲ. ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸಲಾಗುವುದು. ಮುಂದಿನ ಮೂರು ತಿಂಗಳವರೆಗೆ ಅವರಿಗೆ ಬೇಕಾದ ಪೌಷ್ಠಿಕ ಆಹಾರ, ಔಷಧಗಳನ್ನು ಒದಗಿಸುವುದರ ಮೂಲಕ ಅವರನ್ನು ಸದೃಢರನ್ನಾಗಿಸಿ ಕೊರೊನಾದಿಂದ ರಕ್ಷಿಸುವ ಕೆಲಸ ಮಾಡಲಾಗುವುದು. ತಪಾಸಣೆಯ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್, ಪ್ರೋಟಿನ್ ಸೇರಿದಂತೆ ರೋಗ ನಿರೋಧ ಶಕ್ತಿ ಹೆಚ್ಚಿಸುವ ಪೂರಕ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಹಾವೇರಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ 30 ರಿಂದ 50 ಸಾವಿರ ಮಕ್ಕಳಿದ್ದಾರೆ. ಅವರನ್ನು ತಪಾಸಣೆ ಮಾಡಿ, ಅವರ ಬಯೋಡಾಟಾ ಆರೋಗ್ಯ ಸಮಸ್ಯೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಮುಂದಿನ ನಾಲ್ಕೈದು ತಿಂಗಳು ಮಾನಿಟರ್ ನಡೆಸಲಾಗುವುದು. ಶಿಕ್ಷಕರು, ಪಾಲಕರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಧಣಿವರಿಯದೆ ಕೆಲಸ ಮಾಡಿ ಯಶಸ್ವಿ ಮಾಡಬೇಕು ಎಂದು ಸಚಿವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡದ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಾಳಜಿಯಿಂದ ಕೊರೊನಾ ಮೂರನೇ ಅಲೆಯ ಪ್ರಭಾವದಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ. ಮಕ್ಕಳಿಗೆ ಸಣ್ಣ ಜ್ವರ, ಸಿಂಬಳ ಬಂದರೂ ತಕ್ಷಣವೇ ಸರಕಾರಿ ಆಸ್ಪತ್ರೆಗೆ ಸೇರಿಸಬೇಕು. ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಮಕ್ಕಳನ್ನು ತಪಾಸಣೆಗೆ ಕರೆದುಕೊಂಡು ಹೋಗಬೇಡಿ. ಮುಂದಿನ ಮೂರು ತಿಂಗಳವರೆಗೆ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಬೇರೆಯವರ ಮನೆಗೆ ಮಕ್ಕಳನ್ನು ಕಳುಹಿಸಬೇಡಿ. ಶಿಕ್ಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಚಿಕಿತ್ಸೆಗೆ ನೆರವು ಪಡೆಯಿರಿ ಎಂದು ಮನವಿ ಮಾಡಿದರು.
ಪೌಷ್ಠಿಕ ಕಿಟ್ ವಿತರಣೆ
ಇದೇ ವೇಳೆ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್, ಅಕ್ಷರ ದಾಸೋಹದಡಿ ಆಹಾರದ ಕಿಟ್, ಅಂಗವಾಡಿ ಮಕ್ಕಳಿಗೆ ಔಷಧಿ ಕಿಟ್, ಕಡಿಮೆ ತೂಕದ ಮಕ್ಕಳಿಗೆ ಪೂರಕ ಪೌಷ್ಠಿಕ ಪ್ರೋಟಿನ್ ಕಿಟ್‍ಗಳನ್ನು ಗೃಹ ಸಚಿವರು ಹಾಗೂ ಶಾಸಕರು ವಿತರಿಸಿದರು.
ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್. ಎಸ್. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ. ವೈ. ಶೆಟ್ಟೆಪ್ಪನವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ. ಆರ್. ಹಾವನೂರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್. ಪಾಟೀಲ, ನಗರಸಭೆ ಸದಸ್ಯರು, ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.