ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಷಯದಿಂದ ನೀರು ಹರಿಸಲಾಗುವ ಕಾಲುವೆಗಳ ನಿರ್ವಹಣೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಈಗ ಟೆಂಡರ್ ಕರೆದಿದ್ದಾರೆ. ಅಧಿಕಾರಿಗಳ ಈ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ, ಆಲಮಟ್ಟಿಯಲ್ಲಿ ಕಳೆದ 18 ವರ್ಷಗಳಿಂದ ನೀರು ಸಂಗ್ರಹಿಸಲಾಗುತ್ತಿದೆ. ಪ್ರತಿಬಾರಿ ಮಾರ್ಚ್ ತಿಂಗಳಲ್ಲಿ ಕಾಲುವೆ ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಲುವೆಗಳ ನಿರ್ವಹಣೆ ಮುಗಿದು ಜೂನ್ ವೇಳೆಗೆ ಕಾಲುವೆಗಳು ನೀರು ಹರಿಸಲು ಸಿದ್ಧವಾಗುತ್ತಿದ್ದವು. ಆದರೆ, ಈ ಬಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜೂನ್ ತಿಂಗಳಲ್ಲಿ ಟೆಂಡರ್ ಕರೆಯಲಾಗಿದ್ದು, ಇದರಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳ ಈ ಅವೈಜ್ಞಾನಿಕ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈ ಬಾರಿ ಜೂನ್ ತಿಂಗಳಿನಲ್ಲಿಯೇ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಜೆ ನೀರಿನ ಒಳಹರಿವು ಆರಂಭವಾಗಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.
ಮತ್ತೋಂದೆಡೆ, ಜಲಾಷಯ ಭರ್ತಿಯಾಗದಿದ್ದರೂ ಆಲಮಟ್ಟಿ ಮತ್ತು ನಾರಾಯಣಪುರ ಜಲಾಷಯಗಳಿಂದ ನೀರು ಬಿಡುಗಡೆ ಮಾಡಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇದಕ್ಕೆ ಸೂಕ್ತ ಕಾರಣವೇನು ಎಂಬುದರ ಕುರಿತು ತನಿಖೆಯಾಗಬೇಕು ಎಂದು ರೈತ ಮುಖಂಡರೂ ಆಗಿರುವ ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.