ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ ರೂ. 50 ಕೋ. ಗೂ ಹೆಚ್ಚು ಮೌಲ್ಯದ ನಾನಾ ಬಗೆಯ ಮಾದಕ ದ್ರವ್ಯ(ಡ್ರಗ್ಸ್)ನ್ನು ಶನಿವಾರ ನಾಶ ಪಡಿಸಲಾಗುವುದು ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶನಿವಾರ ಅಂತಾರಾಷ್ಟ್ರೀಯ ಡ್ರಗ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಡ್ರಗ್ಸ್ ನಾಶ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೆನ್ ಸೇರಿದಂತೆ ಒಟ್ಟು ಹನ್ನೆರಡು ಪ್ರಕಾರದ ಮತ್ತು ರೂ. 50.23 ಕೋ. ಮೌಲ್ಯದ ನಾನಾ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು. ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು ಎಂದು ಅವರು ತಿಳಿಸಿದರು.
2020ನೇ ವರ್ಷದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4066 ಪ್ರಕರಣಗಳನ್ನು ದಾಖಲಿಸಿಕೊಂಡು 5291 ಜನರನ್ನು ಬಂಧಿಸಲಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿ PIT NDPS ಕಾಯಿದೆ (ಪ್ರಿವೆನಶನ್ ಆಫ್ ಇಲ್ಲಿಸಿಟ್ ಟ್ರಾಫಿಕಿಂಗ್ ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್) ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದು ಒಂದು ರೀತಿ ಗೂಂಡಾ ಕಾಯಿದೆ ಇದ್ದಂತೆ. ಅಷ್ಟು ಬೇಗ ಜಾಮೀನು ಸಿಗುವುದಿಲ್ಲ. ವಿದೇಶಿಗರು ಸೇರಿದಂತೆ ಹಲವರನ್ನು ಈ ಕಾಯಿದೆ ಅಡಿ ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎನ್ ಡಿ ಪಿ ಎಸ್ ಕಾಯಿದೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ಇದಕ್ಕಾಗಿ ನ್ಯಾಷನಲ್ ಲಾ ಸ್ಕೂಲ್ ಜತೆ ಮಾತುಕತೆ ನಡೆಯುತ್ತಿದೆ. ಮುಂಬರುವ ಅಧಿವೇಶನದಲ್ಲಿ ಈ ಕಾಯಿದೆಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ವೇಳೆ, ಸೆಲೆಬ್ರಿಟಿಗಳ ಡ್ರಗ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣದ ತನಿಖೆ ಮುಗಿದಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು. ಕಳೆದ ವರ್ಷ ನಮ್ಮ ಪೋಲಿಸರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಒಂದೇ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ ಜಾಲಗಳನ್ನು ಬೇಧಿಸಿದ್ದಾರೆ ಅವರು ತಿಳಿಸಿದರು.
ಇದು ಕೊರೊನಾ ಸಂದರ್ಭ. ಅಧಿವೇಶನ ಬೇಡ ಎಂದು ವಿಷಯ ಸಮಿತಿ ಸ್ಪೀಕರ್ ಗೆ ವರದಿ ಸಲ್ಲಿಸಿದೆ. ಈಗ ಡೆಲ್ಟಾ, ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಪತ್ತೆಯಾಗುತ್ತಿದೆ. ಈಗಿನ ಕೊರೊನಾ ಸ್ಥಿತಿ ನೋಡಿಕೊಂಡು ಸಿಎಂ ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.