ಜಿಂದಾಲ್ ಗೆ ನೀಡಿದಂತೆ ನಮಗೆ ರಾಜ್ಯದಲ್ಲಿ ಎಲ್ಲಿಯಾದರೂ 500 ಎಕರೆ ಜಾಗ ನೀಡಿ- ಗೋಶಾಲೆ ಆರಂಭಿಸುತ್ತೇವೆ ಎಂದು ಸಿಎಂ ಗೆ ಪತ್ರ ಬರೆದ ಯತ್ನಾಳ

ವಿಜಯಪುರ: ಸದಾ ಮುಖ್ಯಮಂತ್ರಿ ಅವರ ಪುತ್ರರ ವಿಚಾರದಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿರುವ ಯತ್ನಾಳ, ಈಗ ಹೊಸದೊಂದ ಬೇಡಿಕೆ ಇಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಬಾರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಯತ್ನಾಳ, ರಾಜ್ಯದ ಯಾವುದಾದರೊಂದು ಭಾಗದಲ್ಲಿ 500 ಎಕರೆ ಜಮೀನು ನೀಡಿ. ತಾವು ಅಧ್ಯಕ್ಷರಾಗಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಗೋಶಾಲೆ ಆರಂಭಿಸುವುದಾಗಿ ಆಗ್ರಹಿಸಿದ್ದಾರೆ.

ಈಗಾಗಲೇ ತಮ್ಮ ಸಂಸ್ಥೆಯ ವತಿಯಿಂದ ಕಗ್ಗೋಡ ಗ್ರಾಮದಲ್ಲಿ ವಿಶಾಲವಾದ ಪ್ರದೇಶದಲ್ಲಿ ಗೋವುಗಳ ಗೋರಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ದೇಶಿ ಗೋವುಗಳ ಸಂತತಿ, ತಳಿ ಅಭಿವೃದ್ಧಿ ಮತ್ತು ಸಂಶೋಧನೆ ಜೊತೆಗೆ ಗೋವುಗಳ ರಕ್ಷಣೆ ಮಾಡಲಾಗುತ್ತಿದೆ. ಇಲ್ಲಿ 1000ಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಈ ಹಿನ್ನೆಲೆಯಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯು ಕರ್ನಾಟಕದಲ್ಲಿಯೇ ದೊಡ್ಡ ಪ್ರಮಾಣದ ಮತ್ತು ಮಾದರಿಯಾಗುವಂತೆ 10 ಸಾವಿರ ಗೋವುಗಳ ಗೋಶಾಲೆ ಅರಂಭಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ 500 ಎಕರೆ ಜಮೀನಿನ ಅವಶ್ಯತೆ ಇದೆ.

ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಗೋಶಾಲೆ ಆರಂಭಿಸಲು 500 ಎಕರೆ ಜಮೀನು ನೀಡುವಂತೆ ಸಿಎಂ ಗೆ ಯತ್ನಾಳ ಬರೆದ ಪತ್ರ

ಈಗಾಗಲೇ ರಾಜ್ಯ ಸರಕಾರ ಜಿಂದಾಲ ಕಂಪನಿಗೆ ರೂ. 1.50 ಲಕ್ಷ ಎಕರೆಯಂತೆ ನಿಗದಿ ಮಾಡಿ ಜಮೀನು ನೀಡಿದೆ. ಅದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದ ರೀತಿಯಲ್ಲಿಯೇ ನಮ್ಮ ಶ್ರೀ ಸಿದ್ದೇಶ್ವರ ಸಂಸ್ಥೆಗೆ 500 ಎಕರೆ ಭೂಮಿ ನೀಡಬೇಕು. ಇದಕ್ಕಾಗಿ ನಾವು ಪ್ರತಿ ಎಕರೆಗೆ ರೂ. 2 ಲಕ್ಷ ಗಳನ್ನು ಪಾವತಿಸುತ್ತೇವೆ. ಅಲ್ಲದೇ, ಜಿಂದಾಲ ಕಂಪನಿಗೆ ವಿಧಿಸಿದ ಷರತ್ತು ಮತ್ತು ಕರಾರುಗಳಿಗೆ ಬದ್ಧವಾಗಿರುತ್ತೇವೆ. ನಮ್ಮ ಹಿಂದು ಧರ್ಮದ ಪವಿತ್ರ ಪುಣ್ಯದ ಕಾರ್ಯವಾದ ದೇಶಿ ಗೋವುಗಳ ರಕ್ಷಣೆ, ಸಂತತಿಯ ಅಭಿವೃದ್ಧಿಗೆ ಪಣತೊಟ್ಟಿದ್ದು, ಕರ್ನಾಟಕದ ಯಾವುದಾದರೂ ಮೂಲೆಯಲ್ಲಾದರೂ ಸರಿ 500 ಎಕರೆ ಜಮೀನು ನೀಡಿ. ಜಿಂದಾಲ್ ಗೆ ನೀಡಿದಂತೆ, ಕರಾರು ಷರತ್ತುಗಳನ್ನು ವಿಧಿಸಿ ಸಚಿವರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಆರ್. ಅಶೋಕ ಅವರನ್ನು ಒಳಗೊಂಡ ಉಪಸಮಿತಿಗೆ ನಮ್ಮ ಮನವಿಯನ್ನು ಕಳುಹಿಸಿ ಅವರಿಂದ ಶೀಘ್ರ ಶಿಫಾರಸು ತರಿಸಿ ಭೂಮಿಯನ್ನು ಮಂಜೂರಿ ಮಾಡಬೇಕು. ಜಮೀನು ನೀಡಿದ ಕೂಡಲೇ ಗೋಶಾಲೆ ಕಾಮಗಾರಿ ಕೆಲಸ ಪ್ರಾರಂಸಭಿಸಲು ಅನುಕೂಲವಾಗುತ್ತದೆ ಎಂದು ಕೋರುತ್ತೇನೆ ಎಂದು ಯತ್ನಾಳ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Leave a Reply

ಹೊಸ ಪೋಸ್ಟ್‌