ಮೈಸೂರು: ಯಡಿಯೂರಪ್ಪ ದೊಡ್ಡ ನಾಯಕರು. ಲಿಂಗಾಯಿತರಲ್ಲಿ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಆದರೆ, ಲಿಂಗಾಯಿತರಲ್ಲಿ ಪರ್ಯಾಯ ನಾಯಕರಿಲ್ಲ ಎನ್ನುವುದು ಸುಳ್ಳು ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
ಸೆಕೆಂಡ್ ಲೈನ್ ನಲ್ಲಿ ಬಹಳಷ್ಟು ಜನ ಲಿಂಗಾಯಿತ ನಾಯಕರಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಾನಿದ್ದೇನೆ. ಶರಣ ಪ್ರಕಾಶ ಪಾಟೀಲ, ಈಶ್ವರ ಖಂಡ್ರೆ ಇದ್ದಾರೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ, ವಿ. ಸೋಮಣ್ಣ, ಜಗದೀಶ ಶೆಟ್ಟರ್, ಉಮೇಶ ಕತ್ತಿ, ಅರವಿಂದ ಬೆಲ್ಲದ ಇದ್ದಾರೆ. ಯಡಿಯೂರಪ್ಪ ಅವರ ನಂತರ ಲಿಂಗಾಯಿತರಲ್ಲಿ ದೊಡ್ಡ ನಾಯಕರ ಸಮೂಹವಿದೆ ಎಂದು ಅವರು ತಿಳಿಸಿದರು.
ಸಿಎಂ ಯಾರಾಗಬೇಕು ಎಂಬುದನ್ನು ಅವರವರೇ ಘೋಷಿಸಿಕೊಂಡರೆ ಆಗುವುದಿಲ್ಲ. ಜನ ಬಯಸಬೇಕಾಗುತ್ತದೆ. ಪಕ್ಷ ಅಧಿಕಾರಕ್ಕೆ ಬರಬೇಕಾಗುತ್ತದೆ. ಎಂಎಲ್‌ಎಗಳು ಹೇಳಬೇಕಾಗುತ್ತದೆ. ಪಕ್ಷ ನಿರ್ಧಾರ ಮಾಡಬೇಕಾಗುತ್ತದೆ. ಆಗ ಮುಖ್ಯಮಂತ್ರಿ ನಿರ್ಧಾರವಾಗುತ್ತದೆ. ನಾವೇ ಸ್ವಯಂ ಸರ್ಟಿಫಿಕೇಟ್ ತೆಗೆದುಕೊಂಡರೆ ಮುಖ್ಯಮಂತ್ರಿಯಾಗ್ತೀವಾ? ಎಂದು ಅವರು ಪ್ರಶ್ನಿಸಿದರು.
ಕೊರೊನಾ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದ್ದ ಸರಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಗೊಂದಲದ ಹೊಲಸು ರಾಜಕೀಯ ಬೇಕಾಗಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ಜನ ಲಕ್ಷಾಂತರ ತಮ್ಮ ಪ್ರಾಣ ಕಳೆದಕೊಂಡಿದ್ದಾರೆ. ಅನೇಕ ಮನೆಗಳು ಮುರಿದಿವೆ. ಅನೇಕ ಮಕ್ಕಳು ಅನಾಥರಾಗಿದ್ದಾರೆ. ಬಹಳ ಕೆಟ್ಟ ಪರಿಸ್ಥಿತಿ ಇದೆ. ನನ್ನದೊಂದು ಆಸ್ಪತ್ರೆ ಇರುವುದರಿಂದ ಶೇ. 60ರಷ್ಟು ಹೊರೆಯನ್ನು ಹೊತ್ತಿದ್ದೇನೆ. ಮಹಾರಾಷ್ಟ್ರದಿಂದ ಬಂದವರಿಗೂ ಕೂಡ ಸರಕಾರ ನಿಗದಿ ಪಡಿಸಿರುವುದಕ್ಕಿಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿದ್ದೇವೆ. ಇದಾಗಿಯೂ ನಾವು ಅಂದು ಹತ್ತಿಪ್ಪತ್ತು ರೋಗಿಗಳನ್ನು ಕಳುಹಿಸುವ ಪರಿಸ್ಥಿತಿ ಇತ್ತು. 23 ದಿನ ದೊಡ್ಡ ತೊಂದರೆಯಾಗಿದೆ ಎಂದು ಮಾಜಿ ಸಚಿವರು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ನಾವು ಮಾನವೀಯತೆ ಮೆರೆಯಬೇಕು. ಜನರ ಪ್ರಾಣವನ್ನು ರಕ್ಷಿಸಬೇಕು. ಅದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದ ಎಂ. ಬಿ. ಪಾಟೀಲ, ಕಾಂಗ್ರೆಸ್ ನಲ್ಲಿ ಬಾವಿ ಮುಖ್ಯಮಂತ್ರಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಅಭಿಮಾನದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಚಾರವಾಗಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಸೂಚಿಸಿದೆ ಎಂದು ತಿಳಿಸಿದರು.
ಮುಂದಿನ ಮುಖ್ಯಮಂತ್ರಿ ವಿಚಾರ ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗಿದೆ. ಆದರೆ ಕಾಂಗ್ರೆಸ್ ಇತಿಹಾಸದಲ್ಲಿಯೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಉದಾಹರಣೆ ಇಲ್ಲ. ಯಾವ ರಾಜ್ಯದಲ್ಲೂ ಕಾಂಗ್ರೆಸ್ ಚುನಾವಣೆಗೂ ಮುಂಚಿತವಾಗಿ ಸಿಎಂ ಅಭ್ಯರ್ಥಿ ಹೆಸರು ಹೇಳಿಲ್ಲ. ಹೀಗಾಗಿ ಮುಖ್ಯಮಂತ್ರಿ ಯಾರಾಗಬೇಕು ಅನ್ನುವ ಚರ್ಚೆ ಅಪ್ರಸ್ತುತ. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಆದ್ಯತೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಗುರಿ ಮುಟ್ಟಿದ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಬಳಿಕ ಹೈಕಮಾಂಡ್ ಮುಖ್ಯಮಂತ್ರಿ ಯಾರಾಗಬೇಕೆಂದು ಸೂಚನೆ ನೀಡುತ್ತದೆ. ಹೀಗಾಗಿ ಯಾರೋ ಮಾತನಾಡಿದ ವಿಚಾರಕ್ಕೆ ಹೆಚ್ಚು ಬೆಲೆ ಕೊಡಬೇಕಿಲ್ಲ ಎಂದು ಅವರು ತಿಳಿಸಿದರು.
ಇದೇ ವೇಳೆ ನಿಶ್ಚಿತವಾಗಿ ನಾನೂ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಂ. ಬಿ. ಪಾಟೀಲ ಪರೋಕ್ಷವಾಗಿ ಹೇಳಿದರು. ತಾವು ಸಿಎಂ ಅಭ್ಯರ್ಥಿಯ ಎಂಬ ಪ್ರಶ್ನೆಗೆ ಪರೋಕ್ಷವಾಗಿ ಉತ್ತರಿಸಿದ ಎಂ.ಬಿ.ಪಾಟೀಲ್, ಎಲ್ಲರಲ್ಲಿಯೂ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇರುತ್ತದೆ. ಆದರೆ ದುರಾಸೆ ಇರಬಾರದು. ನಮ್ಮ ಗುರಿ ಕಾಂಗ್ರೆಸ್ ಅನ್ನ ಅಧಿಕಾರಕ್ಕೆ ತರುವುದು. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇದೆ. ನಾನು ಪಕ್ಷದ ಶಿಸ್ತು ಪಾಲನೆ ಮಾಡುತ್ತೇನೆ. ಮುಖ್ಯಮಂತ್ರಿ ಚರ್ಚೆ ಬೇಡ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಸೂಚನೆ ನೀಡಿದ್ದಾರೆ. ಸುರ್ಜೆವಾಲ ಅವರ ಸೂಚನೆ ನಾನು ಪಾಲನೆ ಮಾಡುತ್ತೇನೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಸಾಮೂಹಿಕ ನಾಯಕತ್ವದ ಮೂಲಕ ನಾವು ಚುನಾವಣೆ ಎದುರಿಸುತ್ತೇವೆ ಎಂದು ಮಾಜಿ ಸಚಿವರೂ ಆಗಿರುವ ಎಂ. ಬಿ. ಪಾಟೀಲ ತಿಳಿಸಿದರು.