ವಿಜಯಪುರ: ಸಿಎಂ ಅಭ್ಯರ್ಥಿಯ ಬಗ್ಗೆ ಯಾರೂ ಮಾತನಾಡದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸ್ಪಷ್ಟ ಸೂಚನೆ ನೀಡಿದ್ದಾರೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ತಿಳಿಸಿದ್ದಾರೆ
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಶಾಸಕಾಂಗ ಸಭೆ ನಡೆಸಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಯಾರೋ ಹೇಳಿದರು ಎಂದು ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ಮುಂದಿನ ಸಿಎಂ ವಿಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ಪ್ರತಿನಿಧಿ ಇರುತ್ತಾರೆ. ಅವರ ಮುಂದೆ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಶಾಸಕಾಂಗ ಸಭೆಯಲ್ಲಿ ಆಯ್ಕೆಯಾದವರು ಮುಖ್ಯಮಂತ್ರಿಯಾಗುತ್ತಾರೆ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತದೆ ಎಂದು ಅವರು ತಿಳಿಸಿದರು.
ಮುಂದಿನ ಮುಖ್ಯಮಂತ್ರಿ ವಿಚಾರದ ಬಗ್ಗೆ ಯಾರೂ ಮಾತನಾಡಬಾರದು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸಹ ಈ ಬಗ್ಗೆ ಸೂಚನೆ ನೀಡಿದ್ದಾರೆ. ಸದ್ಯ ಮುಖ್ಯಮಂತ್ರಿ ವಿಚಾರದಲ್ಲಿ ಯಾರೂ ಹೇಳಿಕೆ ನೀಡಬಾರದು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಶಾಸಕರಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.
ಜನರು ಬಿಜೆಪಿ ಸರಕಾರದಿಂದಾಗಿ ಬೇಸತ್ತಿದ್ದಾರೆ. ರಾಜ್ಯವನ್ನು ಬಿಜೆಪಿ ದುಸ್ಥಿತಿಗೆ ತಳ್ಳಿದೆ.. ಬಿಜೆಪಿ ಸರಕಾರ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿದ್ದು, ಇದನ್ನು ಕಿತ್ತೊಗೆಯಲು ಜನರು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಎಸ್. ಆರ್. ಪಾಟೀಲ ವಾಗ್ದಾಳಿ ನಡೆಸಿದರು.
ಲಸಿಕೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಎಡವಿವೆ. ರಾಜ್ಯದಲ್ಲಿ ಐದು ಕೋಟಿಯಲ್ಲಿ ಅರ್ಧದಷ್ಟು ಜನರಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಈವರಗೆ ರಾಜ್ಯದಲ್ಲಿ ಕೇವಲ ಶೇ. 5ರಷ್ಟು ಜನರಿಗೆ ಮಾತ್ರವೇ ಲಸಿಕೆ ಹಾಕಲಾಗಿದೆ. ಶಾಲೆ ಆರಂಭಿಸುವ ಮೊದಲು ಮಕ್ಕಳಿಗೆ ಲಸಿಕೆ ನೀಡಿ ಶಾಲೆ ಆರಂಭಿಸಲಿ ಎಂದು ಎಸ್. ಆರ್. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.