ಮಹಾರಾಷ್ಟ್ರ ಮತ್ತೀತರ ನೆರೆಯ ರಾಜ್ಯಗಳಿಗೆ ಸಾರ್ವಜನಿಕರು ತೆರಳಲು, ಮರಳಲು ಸರಕಾರ ವಿಧಿಸಿರುವ ಷರತ್ತುಗಳೇನು ಗೊತ್ತಾ?

ವಿಜಯಪುರ: ಸಂಭವನೀಯ ಕೊರೊನಾ 3ನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಬಿಗೀ ನಿಲುವು ತೆಗೆದುಕೊಂಡಿದ್ದು, ನೆರೆಯ ರಾಜ್ಯಗಳಿಗೆ ತೆರಳಲು ಮತ್ತು ಅಲ್ಲಿಂದ ಬರುವವರಿಗಾಗಿ ಹಲವಾರು ಷರತ್ತುಗಳನ್ನು ವಿಧಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ್ದ ಗಡಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಎಲ್ಲ ಅರ್ಹ ಜನರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರಕ್ಕೆ ಪ್ರಯಾಣಿಸುವವರು ಮತ್ತು ಬರುವವರಿಗಾಗಿ ವಿಜಯಪುರ ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳು

ವಿಜಯಪುರ ಜಿಲ್ಲೆಯ ಗಡಿ ಭಾಗಗಳಾದ ಚಡಚಣ ತಾಲೂಕಿನ ದೂಳಖೇಡ, ಶಿರಾಡೋಣ ಮತ್ತು ಇತರೆ ಚೆಕ್ ಪೋಸ್ಟಗಳನ್ನು ಬಲಪಡಿಸಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಪ್ರಮುಖವಾಗಿ ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಜೂ. 25 ರಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳು ರಾಜ್ಯದ ಗಡಿ ಭಾಗದ ವಿಜಯಪುರ, ಬೆಳಗಾವಿ, ಬೀದರ, ಕಲಬುರಗಿ ಮತ್ತು ಬಾಗಲಕೋಟ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ರಾಜ್ಯಕ್ಕೆ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ ವಿಧಿಸಲಾಗಿರುವ ಷರತ್ತುಗಳು

ಮಹಾರಾಷ್ಟದಿಂದ ರಾಜ್ಯಕ್ಕೆ ಆಗಮಿಸುವವರು 72 ಗಂಟೆಗಳ ಮುಂಚೆ ಪಡೆದಿರುವ ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ತಂದಿದ್ದರೆ ಮುಂದಿನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ವರದಿ ತಂದಿರದಿದ್ದರೆ ಮತ್ತು ಲಸಿಕೆಯನ್ನು ಪಡೆದಿರುವ ದಾಖಲಾತಿ ಹೊಂದಿದ್ದರೆ ಹಾಗೂ ಕೊರೊನಾ ಸೋಂಕಿನ ಲಕ್ಷಣಗಳು ಇರದಿದ್ದರೆ ಅವರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಒಂದು ವೇಳೆ ಲಸಿಕೆಯನ್ನು ಪಡೆದಿದ್ದು ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಸ್ಥಳದಲ್ಲಿಯೇ ರ‍್ಯಾಟ್ ಪರೀಕ್ಷೆ ಮಾಡಿಸಲಾಗುತ್ತದೆ. ಈ ಪರೀಕ್ಷೆ ಪಾಸಿಟಿವ್ ಬಂದಲ್ಲಿ ಟ್ರೆಯೆಜಿಂಗ್ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ರ‍್ಯಾಟ್ ಪರೀಕ್ಷೆ ನೆಗೆಟಿವ್ ಬಂದರೆ, ಆರ್ ಟಿ ಪಿ ಸಿ ಆರ್ ಟೆಸ್ಟ್ ಗಾಗಿ ಅವರ ಗಂಟಲು ದ್ರವವನ್ನು ಸಂಗ್ರಹಿಸಲಾಗುವುದು ಮತ್ತು ಅವರಿಂದ ಪೂರ್ಣ ವಿಳಾಸವನ್ನು ಪಡೆದು ಆರ್ ಟಿ ಪಿ ಸಿ ಆರ್ ಫಲಿತಾಂಶ ಬರುವವರೆಗೆ ಹೋಂ-ಕ್ವಾರಂಟೈನ್ ನಲ್ಲಿರಲು ಸೂಚಿಸಿ, ಮುಂದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಆರ್ ಟಿ ಪಿ ಸಿ ಆರ್ ಪಾಸಿಟಿವ್ ಬಂದಲ್ಲಿ ಟ್ರೈಯೆಜಿಂಗ್ ಮಾಡಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಮಹಾರಾಷ್ಟ್ರಕ್ಕೆ ಪ್ರಯಾಣಿಸುವವರು ಮತ್ತು ಬರುವವರಿಗಾಗಿ ವಿಜಯಪುರ ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳು

ಒಂದು ವೇಳೆ ಪ್ರಯಾಣಿಕರು ವಿಜಯಪುರ ಜಿಲ್ಲೆಯವರೇ ಆಗಿದ್ದಲ್ಲಿ ಲಸಿಕೆಯನ್ನು ಪಡೆದಿರದಿದ್ರೆ ಅವರ ವಿಳಾಸವನ್ನು ಖಚಿತ ಪಡಿಸಿಕೊಂಡು ಸಮೀಪದ ಪಿ ಎಚ್ ಸಿ ಲಸಿಕಾ ಕೇಂದ್ರಕ್ಕೆ ಅಥವಾ ಮೋಬೈಲ್ ಲಸಿಕಾ ತಂಡಕ್ಕೆ ಕಳುಹಿಸಿ ಲಸಿಕೆ ಪಡೆಯುವ ಕುರಿತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವವರಿಗೆ ಇರುವ ಷರತ್ತುಗಳು

ಕೊರೊನಾ ಲಸಿಕೆಯನ್ನು ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿದ್ದರೆ ಮತ್ತು ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇರದಿದ್ದರೆ ಅಂಥವರನ್ನು ಮುಂದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು. ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಸ್ಥಳದಲ್ಲಿಯೇ ರ‍್ಯಾಟ್ ಪರೀಕ್ಷೆ ಮಾಡಿಸಲಾಗುವುದು. ರ‍್ಯಾಟ್ ಪರೀಕ್ಷೆ ನೆಗೆಟಿವ್ ಬಂದಲ್ಲಿ ಆರ್ ಟಿ ಪಿ ಸಿ ಆರ್ ಟೆಸ್ಟ ಸಲುವಾಗಿ ಅವರ ಗಂಟಲು ದ್ರವ ಮತ್ತು ಪೂರ್ಣ ವಿಳಾಸವನ್ನು ಪಡೆದು ಆರ್ ಟಿ ಪಿ ಸಿ ಆರ್ ನ ಫಲಿತಾಂಶ ಬರುವವರೆಗೆ ಹೋಂ-ಕ್ವಾರಂಟೈನ್ ನಲ್ಲಿರಲು ಸೂಚಿಸಿ ಮುಂದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಒಂದು ವೇಳೆ ರ‍್ಯಾಟ್ ಪರೀಕ್ಷೆ ಪಾಸಿಟಿವ್ ಬಂದಲ್ಲಿ ಅಂಥವರನ್ನು ಟ್ರೈಯೆಜಿಂಗ್ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಲಸಿಕೆಯನ್ನು ಪಡೆಯದೇ ಇರುವ ಪಕ್ಷದಲ್ಲಿ ಸಮೀಪದ ಪಿ ಎಚ್ ಸಿ ಲಸಿಕಾ ಕೇಂದ್ರಕ್ಕೆ ಅಥವಾ ಮೋಬೈಲ್ ಲಸಿಕಾ ತಂಡಕ್ಕೆ ಕಳುಹಿಸಿ ಲಸಿಕೆಯನ್ನು ಪಡೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಇದು ವಿಜಯಪುರ ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಅನ್ವಯವಾಗುತ್ತದೆ.

ಮುಂಜಾಗೃತೆ ಕ್ರಮವಾಗಿ ಗಡಿ ಭಾಗದ ಗ್ರಾಮಸ್ಥರಿಗೆ ಲಸಿಕೆ

ಮುಂಜಾಗೃತ ಕ್ರಮವಾಗಿ ವಿಜಯಪುರ ಜಿಲ್ಲೆಯ ಮಹಾರಾಷ್ಟ್ರದ ಗಡಿ ಭಾಗದ ತಾಲೂಕುಗಳಾದ ಚಡಚಣ ತಾಲೂಕಿನ 41 ಗ್ರಾಮಗಳು, ಇಂಡಿ ತಾಲೂಕಿನ 35 ಗ್ರಾಮಗಳು, ತಿಕೋಟಾ ತಾಲೂಕಿನ 20 ಗ್ರಾಮಗಳು ಮತ್ತು ವಿಜಯಪುರ ತಾಲೂಕಿನ ಎಂಟು ಗ್ರಾಮಗಳು ಸೇರಿ ಜಿಲ್ಲೆಯ ಒಟ್ಟು 104 ಗ್ರಾಮಗಳಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ವ್ಯಕ್ತಿಗಳಿಗೆ ಲಸಿಕೆ ಹಾಕಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ.

ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳಾದ ಸೋಲಾಪುರ ಮತ್ತು ಸಾಂಗಲಿ ಜಿಲ್ಲೆಗಳ ಜಿಲ್ಲಾಧಿಕಾರಿಗಳವರಿಗೆ ತಮ್ಮ ಜಿಲ್ಲೆಗಳಲ್ಲಿ ಆದಷ್ಟು ಬೇಗನೇ ಎಲ್ಲ ಅರ್ಹ ವ್ಯಕ್ತಿಗಳಿಗೆ ಲಸಿಕೆಯನ್ನು ಹಾಕಿಸಲು ವಿನಂತಿ ಪತ್ರ ಬರೆಯಲಾಗುವುದು. ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವನೀಯ 3ನೇ ಅಲೆಯ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸುವುದಲ್ಲದೇ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌