ವಿಜಯಪುರ: ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ನಾನ್ಯಾಕೆ ಸಿಎಂ ಆಗಬಾರದು? ಎಂದು ಸಚಿವ ಉಮೇಶ ಕತ್ತಿ ಪ್ರಶ್ನಿಸಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ತಾವೂ ಕೂಡ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗುವ ಅರ್ಹತೆ ಇದೆ. ಆದರೆ, ಸಧ್ಯಕ್ಕೆ ಸಿಎಂ ಕುರ್ಚಿ ಸಧ್ಯಕ್ಕೆ ಖಾಲಿ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಇನ್ನು ಎರಡು ವರ್ಷ ಯಡಿಯೂರಪ್ಪರೇ ಸಿಎಂ ಆಗಿರುತ್ತಾರೆ. ಸಿಎಂ ಕುರ್ಚಿ ಖಾಲಿಯಾದ ಮೇಲೆ ನೋಡೋಣ. ದೇವರ ಆಶೀರ್ವಾದ, ಈ ಭಾಗದ ಜನರ ಆಶೀರ್ವಾದ ಇದ್ದರೆ ಸಿಎಂ ಆಗುತ್ತೇನೆ ಎಂದು ಅವರು ತಿಳಿಸಿದರು.
ಇದೇ ವೇಳೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಮುಂದುವರೆಯಲಿದೆ ಎಂದು ಉಮೇಶ ಕತ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ, ವಿಧಾನ ಪರಿಷತ ಸದಸ್ಯ ಹಣಮಂತ ಆರ್. ನಿರಾಣಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.