ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜೂ. 30 ಮತ್ತು ಜು. 1 ರಂದು ಸಾರ್ವಜನಿಕರಿಗೆ ಕೊರೊನಾ ಲಸಿಕೆ ಹಾಕಲಾಗುವುದಿಲ್ಲ. ಜನತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಸರಕಾರದ ನಿರ್ದೇಶನದಂತೆ ಮುಂದಿನ ತಿಂಗಳಿನಿಂದ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಮುಂಚಿತವಾಗಿ ಪದವಿ ಕಾಲೇಜುಗಳು, ಡಿಪ್ಲೋಮಾ ಕಾಲೇಜುಗಳು, ಐಟಿಐ ಕಾಲೇಜುಗಳಲ್ಲಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ಭೋದಕ ಮತ್ತು ಭೋದಕರ ಹೊರತಾದ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂ. 28 ರಿಂದ ಈಗಾಗಲೇ ಆಯಾ ಕಾಲೇಜುಗಳಲ್ಲಿ ಲಸೀಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಕೊರೊನಾ ಮೂರನೇ ಅಲೆ ತಡೆಗಟ್ಟಲು ಜೂ. 25 ರಾಜ್ಯ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಸಂವಾದ ನಡೆಸಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ತಾಲೂಕುಗಳಲ್ಲಿ ಲಸಿಕೆ ಹಾಕಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ತಾಲೂಕುಗಳಾದ ಚಡಚಣ, ಇಂಡಿ, ತಿಕೋಟಾ ಮತ್ತು ವಿಜಯಪುರ ತಾಲೂಕುಗಳ ಅಂದಾಜು 104 ಗ್ರಮಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಈ ಎರಡು ಕಾರ್ಯಗಳನ್ನು ಆಧ್ಯತೆಯ ಮೇರೆಗೆ ಕೈಗೊಳ್ಳಬೇಕಾಗಿರುವುದರಿಂದ ಜೂ. 30 ಮತ್ತು ಜು. 1 ರಂದು ವಿಜಯಪುರ ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಳಿದ ಸಾರ್ವಜನಿಕರಿಗೆ ಲಸಿಕೆ ಹಾಕುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 18 ರಿಂದ 44 ವಯಸ್ಸಿನ ದುರ್ಬಲ ಗುಂಪಿನ ಪಲಾನುಭವಿಗಳು ಮತ್ತು ಕರೋನಾ ಮುಂಚೂಣಿ ಕಾರ್ಯಕರ್ತರು 18 ರಿಂದ 44 ವಯಸ್ಸಿನ ಆಧ್ಯತೆ ಗುಂಪಿನವರು ಹಾಗೂ 45 ವರ್ಷ ಮೇಲ್ಪಟ್ಟ ಇತರೆ ಅರ್ಹ ಫಲಾನುಭವಿಗಳಿಗೆ ಎರಡು ದಿನ ತಾತ್ಕಾಲಿಕವಾಗಿ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.