ವಿಜಯಪುರ: ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅನುಕೂಲವಾಗುವಂತೆ ರಾಜ್ಯದ ನಾಲ್ಕು ಸ್ಥಳಗಳಲ್ಲಿ ರೂ. 85 ಕೋ. ವೆಚ್ಚದಲ್ಲಿ ತ್ರಿ ಸ್ಟಾರ್ ಹೊಟೇಲ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ ಖಾತೆ ಸಚಿವ ಸಿ. ಪಿ. ಯೋಗೀಶ್ವರ ತಿಳಿಸಿದ್ದಾರೆ.
ವಿಜಯಪುರ ನಗರದ ಹೊರ ವಲಯದ ಭೂತನಾಳ ಕೆರೆ ಪ್ರದೇಶ ವ್ಯಾಪ್ತಿಯಲ್ಲಿ ರೂ. 17 ಕೋ. ವೆಚ್ಚದಲ್ಲಿ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ತ್ರಿ ಸ್ಟಾರ್ ಹೊಟೇಲ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ 18 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಲು ರೈಟ್ಸ್ ಸಂಸ್ಥೆಯವರಿಗೆ ಸೂಚನೆ ನೀಡಲಾಗಿದೆ. ರಾಜ್ಯ ಸರಕಾರ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಉದ್ಯಮಗಳಿಗೆ ತೆರಿಗೆಯಲ್ಲಿ ವಿನಾಯಿತಿ, ವಿದ್ಯುತ್ ಬಿಲ್ ವಿನಾಯತಿ, ನಾನಾ ತೆರಿಗೆ ವಿನಾಯಿತಿ ನೀಡಿ ಪ್ರವಾಸೋದ್ಯಮ ಪುನಃಶ್ಚೇತನಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರದಲ್ಲಿ ತ್ರಿ ಸ್ಟಾರ್ ಹೋಟೆಲ್ ಗೆ ಶಂಕುಸ್ಥಾಪನೆ ಸಮಾರಂಭ
ಕೇಂದ್ರ ಸರಕಾರ ಕೂಡ ಐದು ಲಕ್ಷ ವಿದೇಶಿ ಪ್ರವಾಸಿಗರಿಗೆ ಉಚಿತ ವೀಸಾ ನೀಡುವ ಯೋಜನೆ ಸಹ ಜಾರಿಗೊಳಿಸಿದೆ. ಐತಿಹಾಸಿಕ ಪ್ರವಾಸೋದ್ಯಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪ್ರವಾಸಿಗರ ಮಾರ್ಗದರ್ಶಿಗಳು ಹಾಗೂ ಏಜೆಂಟ್‌ಗಳಿಗೆ ಯೋಜನೆಗಳನ್ನು ಸಹ ಘೋಷಿಸಿದ್ದು, ರಾಜ್ಯ ಸರಕಾರ ಜಿಲ್ಲೆಯ ಪಾರಂಪರಿಕ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ಐತಿಹಾಸಿಕ ಸ್ಮಾರಕಗಳ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆ ನೀಗಿಸಲು ಕ್ರಮಕೈಗೊಂಡಿದೆ. ಅದರ ಅಂಗವಾಗಿ ವಿಜಯಪುರ, ಹಂಪಿ, ಬೇಲೂರು ಹಾಗೂ ಬಾದಾಮಿಗಳಲ್ಲಿ ರೂ. 85 ಕೋ. ವೆಚ್ಚದ ತ್ರಿ ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನೂತನ ವಿಮಾನ ನಿಲ್ದಾಣ ನಿರ್ಮಾಣದಿಂದ ಪ್ರವಾಸಿಗರಿಗೂ ಹೆಚ್ಚಿನ ಅನುಕೂಲವಾಗಲಿದ್ದು, ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೂ ಗಮನ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿಜಯಪುರದಲ್ಲಿ ತ್ರಿ ಸ್ಟಾರ್ ಹೋಟೆಲ್ ಗೆ ಶಂಕುಸ್ಥಾಪನೆ ಸಮಾರಂಭ
ಪ್ರವಾಸೋದ್ಯಮ ಉತ್ತೇಜನಕ್ಕಾಗಿ ರಾಜ್ಯದ ಐದು ಜಲಾಶಯಗಳ ವ್ಯಾಪ್ತಿಯಲ್ಲಿ ಸಮುದ್ರಯಾನ ಮಾದರಿಯಲ್ಲಿ ಸೀ-ಪ್ಲೇನ್ ಉತ್ತೇಜನಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಈ ಕುರಿತು ಕೇಂದ್ರ ಸರಕಾರದೊಂದಿಗೆ ಸಂಪರ್ಕ ಸಾಧಿಸಿದ್ದು, ಉಡಾನ್ ಯೋಜನೆಯಡಿ ಈ ಯೋಜನೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಈ ಭಾಗದ ಆಲಮಟ್ಟಿ ಜಲಾಶಯ, ಕೃಷ್ಣರಾಜ ಸಾಗರ(ಕೆಆರ್‌ಎಸ್), ತುಂಗಭದ್ರಾ ಜಲಾಶಯ ಸೇರಿದಂತೆ ಇತರ ಗುರುತಿಸಿದ ಜಲಾಶಯಗಳ ವ್ಯಾಪ್ತಿಯಲ್ಲಿ ಲಘು ವಿಮಾನಗಳ ಹಾರಾಟದಿಂದ ಪ್ರವಾಸಿಗರಿಗೆ ವಿಶೇಷವಾಗಿ ಗೋವಾದಿಂದ ನೇರವಾಗಿ ಆಲಮಟ್ಟಿಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗಲಿದೆ. ಜಲಕ್ರೀಡೆ, ಮಕ್ಕಳಿಗೆ ಮನರಂಜನೆಗಾಗಿ ಜಲಸಾಹಸ ಕ್ರೀಡೆ ಉತ್ತೇಜನಕ್ಕೂ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಮಾತನಾಡಿ, ವಿಜಯಪುರ ಹಲವು ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ವಿಶೇಷವಾಗಿ ವಿಶ್ವವಿಖ್ಯಾತ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಮಲೀಕ್-ಏ-ಮೈದಾನ್ ತೋಫ್, ಬಾರಾ ಕಮಾನ್, ಉಪ್ಪಲಿ ಬುರುಜ್ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರವಾಸೋದ್ಯಮ ಇಲಾಖೆ ಮೂಲಕ ಕೂಡ ಹೆಚ್ಚಿನ ಅನುದಾನ ಒದಗಿಸಬೇಕು. ಐತಿಹಾಸಿಕ ಸ್ಮಾರಕಗಳಿಗೆ ವಿದ್ಯುತ್ ಅಲಂಕಾರ ವ್ಯವಸ್ಥೆ ಮಾಡಬೇಕು. ಉತ್ತರ ಭಾರತದ ತಾಜ್‌ಮಹಲ್ ರೀತಿಯಲ್ಲಿ ವಿಶ್ವವಿಖ್ಯಾತಿ ಸ್ಮಾರಕಗಳು ವಿಜಯಪುರದಲ್ಲಿದ್ದು, ಅವುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಜಗತ್ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳು ವಿಜಯಪುರ ಜಿಲ್ಲೆಯಲ್ಲಿರುವುದರಿಂದ ಧಾರವಾಡದಲ್ಲಿರುವ ಪ್ರಾದೇಶಿಕ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಛೇರಿಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲು ಗಮನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಐತಿಹಾಸಿಕ ಆನಂದ ಮಹಲ್ ಸಂರಕ್ಷಣಾ ಕಾಮಗಾರಿಗೆ ಚಾಲನೆ
ಬಳಿಕ ಸಚಿವ ಸಿ. ಪಿ. ಯೋಗೇಶ್ವರ ಅವರು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರೂ. 5 ಕೋ. ವೆಚ್ಚದ ವಿಜಯಪುರ ನಗರದ ಆನಂದ ಮಹಲ್ ಸಂರಕ್ಷಣಾ ಕಾಮಗಾರಿಗಳಿಗೆ ಚಾಲನೆ ನೀಡಿದರು.
ವಿಜಯಪುರ ನಗರದಲ್ಲಿರುವ ಐತಿಹಾಸಿಕ ಆನಂದ ಮಹಲ್ ಸಂರಕ್ಷಣಾ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಯೋಗೇಶ್ವರ
ಈ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ(ಕೆಎಸ್‌ಟಿಡಿಸಿ) ಅಧ್ಯಕ್ಷೆ ಮತ್ತು ಚಿತ್ರನಟಿ ಶ್ರುತಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ, ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಭಜಂತ್ರಿ ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.