ಮಲೇರಿಯಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ- ಅಪರ ಜಿಲ್ಲಾಧಿಕಾರಿ ರಮೇಶ ಕಳಸದ

ವಿಜಯಪುರ: ಡೆಂಗ್ಯೂ ಜ್ವರ ಮಲೇರಿಯಾ ಹಾಗೂ ಚಿಕುನ್‌ ಗುನ್ಯಾದಂಥ ಇತರ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಲೇರಿಯಾ, ಡೆಂಗ್ಯೂ ವಿರೋಧಿ ಮಾಸಾಚರಣೆ ಜಿಲ್ಲಾಮಟ್ಟದ ಅಂತರ ಇಲಾಖೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ರೋಗಗಳು ಹರಡದಂತೆ ಅವಶ್ಯಕ ಮುಂಜಾಗ್ರತೆ ಕ್ರಮಗಳನ್ನು
ಕೈಕೊಳ್ಳುವುದು ತುರ್ತು ಅವಶ್ಯಕತೆಯಾಗಿದೆ ಎಂದು ಅವರುಗಳು ಹೇಳಿದರು.

ವಿಜಯಪುರ ನಗರದ ಕೊಳಚೆ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯವರು ತಕ್ಷಣ ಸ್ವಚ್ಚತಾ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ ಕಸ ಬಿಸಾಡುವುದನ್ನು ನಿಯಂತ್ರಿಸಬೇಕು. ಅಲ್ಲದೇ
ಏಳನೀರು ವ್ಯಾಪಾರಿಗಳು ತೆಂಗಿನ ಚಿಪ್ಪುಗಳನ್ನ ಎಲ್ಲಿಂದರಲ್ಲಿ ಒಗೆಯದಂತೆ ಎಚ್ಚರಿಕೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯ ಶಾಲೆಗಳು, ಅಂಗನವಾಡಿಗಳು, ನಾನಾ ವಸತಿ ನಿಲಯಗಳ ವ್ಯಾಪ್ತಿಯಲ್ಲಿ ನೀರು ಸಂಗ್ರಹವಾಗಿ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ ರಮೇಶ ಕಳಸದ ಜಿಲ್ಲೆಯ ಎಲ್ಲ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹ ಮುನ್ನೆಚ್ಚರಿಕೆ
ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪಸೆ, ಜಿಲ್ಲಾ ರೋಗ ವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ
ಡಾ. ಜೇಬುನ್ನಿಸಾ ಬೇಗಂ ಬೀಳಗಿ, ಜಿಲ್ಲಾ ಮಟ್ಟದ ಅಧಿಕಾರಿಗಳಾದ
ಡಾ. ರಾಜೇಶ್ವರಿ ಗೋಲಗೇರಿ, ಡಾ. ಎಂ. ಬಿ. ಬಿರಾದಾರ, ಡಾ. ಮಹೇಶ ನಾಗರಬೆಟ್ಟ, ಡಾ. ದಾರವಾಡಕರ, ತಾಲೂಕು ಆರೋಗ್ಯ ಅಧಿಕಾರಿ ಡಾ. ಕವಿತಾ, ಡಾ. ಅರ್ಚನಾ ಕುಲಕರ್ಣಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌