ವಿಜಯಪುರ: ಜಗತ್ತಿಗೆ ಕಂಟಕದಂತೆ ಎದುರಾಗಿರುವ ಕೊರೊನಾ ಕಾಯಿಲೆಗೆ ತುತ್ತಾಗಿರುವವರ ಸಂಖ್ಯೆಯಷ್ಟೇ ಜನ ಉದ್ಯೋಗ, ಆಹಾರವಿಲ್ಲದೇ ಬಳಲಿದಿದ್ದಾರೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಐಟಿಐ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವ ಕಟ್ಟಡ ನಿರ್ಮಾಣ ಹಾಗೂ ವಲಸೆ ಕಾರ್ಮಿಕರಿಗೆ ಸುರಕ್ಷಾ(ರಕ್ಷಣಾ) ಮತ್ತು ನೈರ್ಮಲೀಕರಣ ಹಾಗೂ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆ ಹೊಣೆ ಹೊತ್ತಿರುವ ಸದಸ್ಯನೇ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರಿಂದ ಕುಟುಂಬ ಸದಸ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರಕಾರ ಬಡವರಿಗೆ ಆಹಾರ ಕಿಟ್ ಒದಗಿಸುತ್ತಿದೆ. ಕೊರೊನಾ ಕಾಯಿಲೆ ಹರಡುವಿಕೆ ಕಡಿಮೆಯಾಗಿದೆ ಎಂದು ಮೈಮರೆತರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ನಾವೇ ಕಾರಣರಾಗುತ್ತೇವೆ. ಸರಕಾರ ರೂಪಿಸಿರುವ ಸುರಕ್ಷಾ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್. ಜಿ. ಖೈನೂರ, ಜಗದೇವಿ ಸಜ್ಜನ, ಉಮಾಶ್ರೀ ಕೋಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಕೆ. ಕೆ. ದುಮ್ಮವಾಳ, ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ ಬಬಲೇಶ್ವರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಹಿರಿಯ ಮುಖಂಡ ಬಿ. ಜಿ. ಬಿರಾದಾರ, ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.