ಕೊರೊನಾದಿಂದ ಮೃತಪಟ್ಟ ಪಕ್ಷದ ಶಿಸ್ತಿನ ಸಿಪಾಯಿ, ಬಡ ಕಾರ್ಯಕರ್ತನ ಮನೆಗೆ ತೆರಳಿ ಲಕ್ಷ ರೂಪಾಯಿ ನೆರವು ನೀಡಿದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ಆತ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಸಾಮಾನ್ಯ ಕಾರ್ಯಕರ್ತ. ಕಳೆದ ಹಲವಾರು ವರ್ಷಗಳಿಂದ ಕಚೇರಿಗೆ ಯಾರು ಬರಲಿ, ಬಿಡಲಿ. ಪ್ರತಿದಿನ ಬೆಳಿಗ್ಗೆ ತಪ್ಪದೆ ಬಂದು ಕಚೇರಿಯಲ್ಲಿ ಕಸಗೂಡಿಸಿ ಸ್ವಚ್ಛ ಮಾಡಿ ಮಧ್ಯಾಹ್ನ ಮನೆಗೆ ತೆರಳುತ್ತಿದ್ದ. ಅಷ್ಟೇ ಅಲ್ಲ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಅಪ್ಪಟ ಬೆಂಬಲಿಗನಾಗಿದ್ದ. ಜಿಲ್ಲೆ ಎಲ್ಲ ಕಾಂಗ್ರೆಸ್ ನಾಯಕರಿಗೂ ಚಿರಪರಿಚಿತನಾಗಿದ್ದ ವ್ಯಕ್ತಿ. ಆದರೆ, ಇತ್ತೀಚೆಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದ.

ಆತನ ಹೆಸರು ದಾವಲಸಾಬ ಬಾಗವಾನ(59). ವಿಜಯಪುರ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಪೇಟಿ ಬಾವಡಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದ. ಕೊರೊನಾ ಮತ್ತು ಲಾಕಡೌನ್ ಹಿನ್ನೆಲೆಯಲ್ಲಿ ತನ್ನ ಸಂಸಾರ ನಿಭಾಯಿಸಲು ತನ್ನ ಮನೆಯನ್ನು ರೂ. 2 ಲಕ್ಷಕ್ಕೆ ಗಿರವಿ(ಒತ್ತೆ) ಇಟ್ಟಿದ್ದ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೂ ಆಸ್ಪತ್ರೆಯಲ್ಲಿ ನಮ್ಮ ಸಾಹೇಬರು ಎಂ. ಬಿ. ಪಾಟೀಲರು ಎಂದು ಬಡಬಡಿಸುತ್ತಿದ್ದ. ಆತನ ಚಿಕಿತ್ಸೆಗೆ ಮತ್ತೋಬ್ಬ ಕಾಂಗ್ರೆಸ್ ಮುಖಂಡ ವಸಂತ ಹೊನಮೋಡೆ ಮತ್ತು ಇತರರು ಸಹಾಯ ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ.

ಕಾೆಂಗ್ರೆಸ್ ಕಾರ್ಯದರ್ಶಿ ದಾವಲಸಾಬ ಬಾಗವಾನ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಲಿದ ಶಾಸಕ ಎಂ. ಬಿ. ಪಾಟೀಲ

ಈ ವಿಷಯ ತಿಳಿದ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಆತನ ಮನೆಗೆ ಭೇಟಿ ನೀಡಿದರು. ಅಷ್ಟೇ ಅಲ್ಲ, ಆತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ದಾವಲಸಾಬ ಬಾಗವಾನ ನೆನೆದು ಭಾವುಕರಾದರು. ಅಷ್ಟೇ ಅಲ್ಲ, ರೂ. 1 ಲಕ್ಷ ಧನ ಸಹಾಯವನ್ನೂ ಮಾಡಿದರು. ಅಲ್ಲದೇ, ಆತನ ಮನೆಯನ್ನು ಒತ್ತೆಯಿಂದ ಬಿಡಿಸಿಕೊಳ್ಳಲು ಬಾಕಿ ರೂ. 1 ಲಕ್ಷ ಹಣವನ್ನು ಹೊಂದಿಸಿ ನೀಡುವಂತೆ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಮತ್ತು ಇತರರಿಗೆ ಸೂಚನೆಯನ್ನೂ ನೀಡಿದರು. ಅಲ್ಲದೇ, ತಮ್ಮ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ದಾವಲಸಾಬ ಬಾಗವಾನ ಕುಟುಂಬದ ಓರ್ವ ಸದಸ್ಯರಿಗೆ ನೌಕರಿ ಕೊಡುವುದಾಗಿ ಭರವಸೆಯನ್ನೂ ನೀಡಿದರು.

ಶಾಸಕರ ಸೂಚನೆ ಪಾಲಿಸಿದ ಕಾಂಗ್ರೆಸ್ ಅಬ್ದುಲ್ ಹಮೀದ ಮುಶ್ರಿಫ್ ರೂ. 50 ಸಾವಿರ ಹಣವನ್ನು ಮರುದಿನ ತಂದು ನೀಡಿದರು. ಅಲ್ಲದೇ, ಇನ್ನುಳಿದ ರೂ. 50 ಸಾವಿರ ಹಣವನ್ನು ವ್ಯವಸ್ಥೆಯನ್ನೂ ಮಾಡಿದ್ದಾರೆ.

ಈ ಮೂಲಕ ಮಾಜಿ ಸಚಿವ ಎಂ. ಬಿ. ಪಾಟೀಲ ಕಾಂಗ್ರೆಸ್ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರ ಸಮಸ್ಯೆಗಳಿಗೂ ಹೇಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಎಂ. ಬಿ. ಪಾಟೀಲ ಅವರ ಇಂಥ ಮಾತೃ ಹೃದಯದ ಕಾರಣಕ್ಕಾಗಿಯೇ ದಾವಲಸಾಬ ಬಾಗವಾನ ತನ್ನ ಕೊನೆಯ ಕಾಲದಲ್ಲಿಯೂ ಎಂ. ಬಿ. ಪಾಟೀಲ ನಮ್ಮ ನಾಯಕ ಎಂದು ಹೇಳಿಕೊಳ್ಳುತ್ತಿದ್ದ ಎಂದು ಕಾಂಗ್ರೆಸ್ ಮುಖಂಡ ಮತ್ತು ದಾವಲಸಾಬ ಬಾಗವಾನ ಆತ್ಮೀಯ ಮಿತ್ರ ವಸಂತ ಹೊನಮೋಡೆ ಬಸವ ನಾಡಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಾವಲಸಾಬ ಬಾಗವಾನ ಮೇಲೆ ಎಂ. ಬಿ. ಪಾಟೀಲ ಅವರಿಗೂ ಪ್ರೀತಿ ಎಷ್ಟಿತ್ತೆಂದರೆ, ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಆತನನ್ನು ಹೆಸ್ಕಾಂ ಸದಸ್ಯನನ್ನಾಗಿ ಮಾಡಿದ್ದರು. ಅಲ್ಲದೇ, ಆತನ ಮೊದಲ ಮಗಳ ಮದುವೆಗೆ ಹೋಗಿ ಆಶೀರ್ವದಿಸಿ ಬಂದಿದ್ದರು.

ದಾವಲಸಾಬ ಬಾಗವಾನ ಕುಟುಂಬಕ್ಕಿರುವ ಏಕೈಕ ಮನೆಯನ್ನು ಗಿರವಿಯಿಂದ ಬಿಡಿಸಿಕೊಳ್ಳಲು ನೆರವಾಗಿದ್ದಲ್ಲದೆ, ಆತನ ಕುಟುಂಬದ ಸದಸ್ಯರಿಗೆ ಉದ್ಯೋಗದ ಭರವಸೆ ನೀಡಿರುವುದು ಕೇವಲ ದಾವಲಸಾಬ ಬಾಗವಾನ ಕುಟುಂಬಕ್ಕೆ ಮಾತ್ರವಲ್ಲ ಇಡೀ ಪೇಟಿ ಬಾವಡಿ ಪ್ರದೇಶದ ಜನತೆ ಹಾಗೂ ಕಾಂಗ್ರೆಸ್ಸಿನ ಕಾರ್ಯಕರ್ತರಲ್ಲೂ ಸಂತಸ ಮೂಡಿಸಿದೆ.

ಈ ಸಂದರ್ಭದಲ್ಲಿ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಟಪಾಲ ಎಂಜಿನಿಯರ್, ಸುರೇಸ ಘೋಣಸಗಿ, ಜಮೀರ ಭಕ್ಷಿ, ಇದ್ರುಷ್ ಭಕ್ಷಿ, ಬಡೇಪೀರ ಜುನೇಗಿ, ಡಾ. ಮಹಾಂತೇಶ ಬಿರಾದಾರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌