ಮೈಸೂರು: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದರು.
12ನೇ ಶತಮಾನದಲ್ಲಿ ಕಾಯಕ, ದಾಸೋಹ ತತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 18ನೇ ಶತಮಾನಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀ ಗುರುಮಲ್ಲೇಶ್ವರರ ಕಾಲದಲ್ಲಿ.
ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ವವು ಶ್ರೀ ಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು ಎಂಬ ಪ್ರತೀತಿ ಇದೆ.
ವಚನ ಸಾಹಿತ್ಯ ಪ್ರಚಾರ, ಕುಲ ಬೇಧವಿರದೆ ಬಡವರಿಗೆ ಅಂದಿನಿಂದ ಇಂದಿನವರೆಗೂ ಸದಾ ದಾಸೋಹ ನಡೆಯುವಂತಹ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದು ತಮ್ಮ ಪುಣ್ಯ ಎಂದು ಯತ್ನಾಳ ಈ ಸಂದರ್ಭದಲ್ಲಿ ತಿಳಿಸಿದರು.
ದೇವನೂರು ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠಾಧೀಶ ಶ್ರೀ ಮಹಾಂತ ಸ್ವಾಮಿಗಳ ದರ್ಶನ ಪಡೆದ ಪಡೆದು ಗೌರವಿಸಿದ ಯತ್ನಾಳ ಅವರನ್ನು ಶ್ರೀಗಳು ಆಶೀರ್ವದಿಸಿದರು. ಅಲ್ಲದೇ, ಯತ್ನಾಳ ಇದೇ ಸಂದರ್ಭದಲ್ಲಿ ಮಠದ ಕಾರ್ಯ ಚಟುವಟಿಕೆಗಳು ಮತ್ತು ಸಮಾಜದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಿದರು.