ಕೇಂದ್ರ ಸಂಪುಟ ವಿಸ್ತರಣೆ- ಪ್ರಾತಿನಿಧ್ಯ ವಿಜಯಪುರಕ್ಕೊ? ಚಿತ್ರದುರ್ಗಕ್ಕೊ? ಎಂಬುದೇ ಕುತೂಹಲ

ವಿಜಯಪುರ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿರುವ ಮಧ್ಯೆಯೇ ರಾಜ್ಯದಿಂದ ದಲಿತರ ಕೋಟಾದಲ್ಲಿ ಯಾರಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ರಾಜ್ಯದ ಐದೂ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ. ಇವರಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆರನೇ ಬಾರಿ ಸಂಸದರಾಗಿದ್ದರೆ, ವಿ. ಶ್ರೀನಿವಾಸ ಪ್ರಸಾದ(ಚಾಮರಾಜನಗರ) ಎರಡನೇ ಬಾರಿ, ನಾರಾಯಣಸ್ವಾಮಿ(ಚಿತ್ರದುರ್ಗ), ಉಮೇಶ ಜಾಧವ(ಕಲಬುರಗಿ) ಮತ್ತು ಮುನಿಸ್ವಾಮಿ(ಕೋಲಾರ) ಇದೇ ಮೊದಲ ಬಾರಿಗೆ ಸಂಸದರಾಗಿದ್ದಾರೆ.

ರಮೇಶ ಜಿಗಜಿಣಗಿ ಈಗಾಗಲೇ ಒಂದು ಬಾರಿ ಈ ಹಿಂದಿನ ಸರಕಾರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದು, ಈ ಬಾರಿಯೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ದೆಹಲಿ ಮೂಲಗಳ ಪ್ರಕಾರ ಈಗ ರಮೇಶ ಜಿಗಜಿಣಗಿ ಮತ್ತು ನಾರಾಯಣಸ್ವಾಮಿ ಮಧ್ಯೆ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ನಾರಾಯಣಸ್ವಾಮಿ ಅವರು ರಮೇಶ ಜಿಗಜಿಣಗಿ ಅವರ ಶಿಷ್ಯರಾಗಿದ್ದು ಇಬ್ಬರೂ ಜೊತೆಯಾಗಿಯೇ ಈಗಾಗಲೇ ದೆಹಲಿದ್ದಾರೆ.

ಚಿತ್ರದುರ್ಗ ಬಿಜೆಸಿ ಸಂಸದ ಎ. ನಾರಾಯಣಸ್ವಾಮಿ

ಇಬ್ಬರೂ ದಲಿತ ಎಡಗೈ ಸಮುದಾಯಕ್ಕೆ ಸೇರಿದ್ದು ತಮ್ಮಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ದಲಿತ ಸಮುದಾಯದ ಮತಗಳನ್ನು ಪಡೆಯಲು ಬಿಜೆಪಿ ಈಗಿನಿಂದಲೇ ಕಾರ್ಯತಂತ್ರ ರೂಪಿಸಿದೆ.

ಹಿರಿತನದ ಆಧಾರದಲ್ಲಿ ನೋಡುವುದಾದರೆ ವಿಜಯಪುರದಿಂದ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ ಕಳೆದ 40 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದಾರೆ. ಅಲ್ಲದೇ, ವಿವಾದಾತೀತ ವ್ಯಕ್ತಿ. ದಲಿತ ಎಡಗೈ ಮತಗಳನ್ನು ಸೆಳೆಯಬಲ್ಲ ಚಾಣಾಕ್ಷ ರಾಜಕಾರಣಿ. ಪ್ರಚಾರದಿಂದ ದೂರ ಇರುವ ಇವರು ಮಾಡುವ ರಾಜಕಾರಣ ಎಂತೆಂಥ ಘಟಾನುಘಟಿಗಳನ್ನೂ ಆಶ್ಚರ್ಯಚಕೀತರನ್ನಾಗಿ ಮಾಡುತ್ತಿದೆ. ಯಾರು ಎಷ್ಟೇ ವಿರೋಧ ಮಾಡಿದರೂ ಒಂದು ಬಾರಿ ಹೊರತು ಪಡಿಸಿದರೆ ಸತತವಾಗಿ ಆರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅದಕ್ಕೂ ಮುಂಚೆ ರಾಮಕೃಷ್ಣ ಹೆಗಡೆ ಮತ್ತು ಜೆ. ಎಚ್. ಪಟೇಲ ಸಿಎಂ ಆಗಿದ್ದಾಗ ನಾನಾ ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದರೆ ಬಿಜೆಪಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಇವರೇ ಅಗ್ರಗಣ್ಯರಾಗಿದ್ದಾರೆ.

ಹೀಗಾಗಿ ಬಿಜೆಪಿ ರಮೇಶ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡತ್ತೋ? ಅಥವಾ ಚಿತ್ರದುರ್ಗದ ಬಿಜೆಪಿ ಸಂಸದರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೊಸಬರಿಗೆ ಸಚಿವರಾಗಲು ಮೊದಲ ಬಾರಿ ಅವಕಾಶ ಕಲ್ಪಿಸುತ್ತೋ ಎಂಬುದು ಕುತೂಹಲ ಕೆರಳಿಸಿದೆ.

Leave a Reply

ಹೊಸ ಪೋಸ್ಟ್‌