ವಿಜಯಪುರ: ಜು. 10 ರಿಂದ ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಯ ಸಂಬಳ ಕೊಡಲಾಗುವುದು. ಎರಡು ಹಂತದಲ್ಲಿ ಸಂಬಳ ಹಾಕುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಸಮಯದಲ್ಲಿ ಸಾರಿಗೆ ಇಲಾಖೆಗೆ ಅತೀ ಹೆಚ್ಚು ತೊಂದರೆಯಾಗಿದೆ. ಸಂಬಳ ನೀಡಲು ಸಮಸ್ಯೆ ಇದೆ. ಈ ಮೊದಲು ಸಿಎಂ ರೂ. 2480 ಕೋ. ಕೊಟ್ಟಿದ್ದರು. ಈಗ ರೂ. 165 ಕೋ. ನೀಡಿದ್ದಾರೆ. ಜು. 10 ರಿಂದ ಎಲ್ಲರ ಸಂಬಳ ನೀಡಲಾಗುವುದು. ಎರಡು ಹಂತದಲ್ಲಿ ಸಂಬಳ ಹಾಕುತ್ತೇವೆ. ಎಲ್ಲಾ ಸಿಬ್ಬಂದಿಗಳ ಸಂಬಳ ಕ್ಲೀಯರ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ವ್ಯಂಗ್ಯ
ಕೋಡಿಹಳ್ಳಿ ಚಂದ್ರಶೇಖರ ಹೋರಾಟದ ಬಗ್ಗೆ ನಮ್ಮ ಸಾರಿಗೆ ಸಿಬ್ಬಂದಿಗೆ ಗೊತ್ತಾಗಿದೆ. ಕೋಡಿಹಳ್ಳಿ ಅವರಿಗೆ ಹೋರಾಟ ಮಾಡುವುದು ಮಾತ್ರ ಗೊತ್ತು. ನಮ್ಮ ಸಿಬ್ಬಂದಿ ಅವರ ಹೋರಾಟಕ್ಕೆ ಕೈ ಜೋಡಿಸುವುದಿಲ್ಲ. ಹೋರಾಟ ಮಾಡುವುದೊಂದೆ ಕೋಡಿಹಳ್ಳಿಯವರಿಗೆ ಗೊತ್ತು ಎಂದು ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಅವರು ವ್ಯಂಗ್ಯವಾಡಿದರು.
ಕಷ್ಟದಲ್ಲಿ ಸಾರಿಗೆ ಸಿಬ್ಬಂದಿಗೆ ಸಂಬಳ ನೀಡಿದ್ದೇವೆ. ಇಂಥ ಸಮಯದಲ್ಲಿ ಹೋರಾಟ ಮಾಡಿದರೆ ಜನ ಬೆಂಬಲಿಸುವುದಿಲ್ಲ. ಎಲ್ಲ ಸಿಬ್ಬಂದಿಗಳ ಸಂಬಳ ಕ್ಲೀಯರ್ ಮಾಡುತ್ತೇವೆ ಎಂದು ಅವತು ಭರವಸೆ ನೀಡಿದರು.
ಎಚ್ ಡಿ ಕೆ- ಸುಮಲತಾ ವಾಕ್ಸಮರದಿಂದ ಜನರಿಗೆ ತಮಾಷೆಯಾಗಿ ಕಾಣುತ್ತಿದೆ
ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಕ್ ಸಮರ ಜನರಿಗೆ ತಮಾಷೆಯಾಗಿ ಕಾಣುತ್ತಿದೆ. ಕೆ ಆರ್ ಎಸ್ ಜಲಾಷಯ ಬಿರುಕು ವಿಚಾರದ ಬಗ್ಗೆ ಈಗಾಗಲೇ ಚೀಪ್ ಎಂಜಿನಿಯರ್ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಕುಮಾರಸ್ವಾಮಿ ಹಾಗೂ ಸುಮಲತಾ ಮಧ್ಯ ಗಲಾಟೆ ಜೋರಾಗಿ ನಡೆಯುತ್ತಿದೆ. ಜನರಿಗೆ ಅದು ತಮಾಷೆಯಾಗಿ ಕಾಣುತ್ತಿದೆ. ಆದರೆ ನಮಗೆ ಅದನ್ನು ನೋಡಲು ಸಮಯವಿಲ್ಲ ಎಂದು ಹೇಳಿದರು.
ದಿ. ಅಂಬರೀಷ ಸ್ಮಾರಕ ನಿರ್ಮಾಣಕ್ಕೆ ಪೂರಕ ನೆರವು
ಇದೇ ವೇಳೆ, ದಿ. ಅಂಬರೀಶ ಸ್ಮಾರಕ ವಿಚಾರದ ಬಗ್ಗೆ ನಟ ದೊಡ್ಡಣ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಂಬರೀಶ್ ಅವರು ಸಾರ್ವಜನಿಕ ಬದುಕಿನಲ್ಲಿದ್ದರು. ರಾಜಕಾರಣಿಯೂ ಹೌದು, ಚಿತ್ರನಟರೂ ಹೌದು. ಅವರ ಸ್ಮಾರಕ ಮಾಡುವುದರಲ್ಲಿ ತಪ್ಪಿಲ್ಲ. ಅವರ ಸ್ಮಾರಕವಾಗಬೇಕು ಎಂದು ಜನರ ಬಯಕೆಯಾಗಿದೆ. ಜನರ ಬಯಕೆಯಂತೆ ನಮ್ಮ ಸರಕಾರ ಸ್ಮಾರಕ ನಿರ್ಮಾಣಕ್ಕೆ ಪೂರಕ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಸಿಎಂ ಕುರ್ಚಿ ಖಾಲಿಯಿಲ್ಲ- ತಾವು ಆಕಾಂಕ್ಷಿಯೂ ಅಲ್ಲ
ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ನಾನು ಸಿಎಂ ಸ್ಥಾನದ ರೇಸ್ ನಲ್ಲಿ ಇಲ್ಲ. ಮುಂದಿನ ಚುನಾವಣೆ ಬಳಿಕ ಯಾರು ಸಿಎಂ ಆಗುತ್ತಾರೆ ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ನಾನು ಯಾವುದೇ ಅಧಿಕಾರವನ್ನು ಬೇಡಿ ಪಡೆಯುವವನಲ್ಲ. ನಾನು ಯಾವುದೇ ಆಕಾಂಕ್ಷಿಯೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.