ಕೆ ಆರ್ ಎಸ್ ಡ್ಯಾಂ ನಲ್ಲಿ ಯಾವುದೇ ಬಿರುಕು ಇಲ್ಲ-ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ

ವಿಜಯಪುರ: ಕೆ ಆರ್ ಎಸ್ ಜಲಾಷಯದಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಮತ್ತೋಮ್ಮೆ ಸ್ಪಷ್ಟಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಅಲಿಯಾಬಾದ್ ಗ್ರಾಮದ ಹೊರವಲಯದಲ್ಲಿ ನಡೆದ ಕಲ್ಲು ಗಣಿ ಗಣಿ ದುರಂತ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಕೆ ಆರ್ ಎಸ್ ನಲ್ಲಿ ಯಾವುದೇ ಬಿರುಕು ಇಲ್ಲ. ಅಲ್ಲಿರುವ ಮುಖ್ಯ ಎಂಜಿನಿಯರ್ ಸ್ವತಃ ಸೈಟ್ ಗೆ ತೆರಳಿ ಡ್ಯಾಂಗೆ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ. ನಾನೇ ಸ್ವತಃ ಮಾಹಿತಿ ಪಡೆದುಕೊಂಡಿದ್ದೇನೆ, ಅಲ್ಲಿ ಯಾವುದೇ ಬಿರುಕು ಇಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಅಲಿಯಾಬಾದ ಬಳಿ ವ್ಯಕ್ತಿ ಸಾವಿಗೀಡಾದ ಕಲ್ಲು ಗಣಿಕಾರಿಕೆ ಪ್ರದೇಶಕ್ಕೆ ಸಚಿವ ಮುರುಗೇಶ ನಿರಾಣಿ ಭೇಟಿ

ಕೆ ಆರ್ ಎಸ್ ಬಿರುಕು ಬಗ್ಗೆ ಸುಮಲತಾ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ರಾಜಕಾರಣ ಬಗ್ಗೆ ಮಾತನಾಡಲು ಹಿಂದೆಟು ಹಾಕಿದರು. ಅದು ಮಂಡ್ಯ ರಾಜಕಾರಣ. ಅದರ ಬಗ್ಗೆ ನಾನು ಮಾತನಾಡಲ್ಲ. ಅಲ್ಲಿ ಅನುಭವ ಇರುವ ಮಾಜಿ ಸಿಎಂ, ಸಂಸದರು, ಶಾಸಕರು ಇದ್ದಾರೆ. ನನಗಿಂತ ಅನುಭವ ಹೆಚ್ಚು ಇರುವವರು ಇದ್ದಾರೆ. ನಾನು ಯಾವಾಗಲಾದರೂ ಒಮ್ಮೆ ಹೋಗಿ ಬರುವವನು. ಅವರಷ್ಟು ಅನುಭವ ನನಗಿಲ್ಲ. ನನಗೆ ನನ್ನ ಇಲಾಖೆ ಬಗ್ಗೆ ಅಷ್ಟೆ ಅನುಭವ ಇದೆ. ನಾಲ್ಕು ತಿಂಗಳ ಹಿಂದೆ ಬೇಬಿ ಬೆಟ್ಟಕ್ಕೆ ಅಧಿಕಾರಗಳ ಜೊತೆಗೆ ತೆರಳಿ ನೋಡಿದ್ದೇನೆ. ಡ್ಯಾಂನಿಂದ 10 ಕಿ. ಮೀ. ಅಂತರಲ್ಲಿ ಎಲ್ಲ ಗಣಿಗಾರಿಕೆ ಬಂದ್ ಮಾಡಿಸಿದ್ದೇನೆ. ಗಣಿಗಳಲ್ಲಿ ಬ್ಲಾಸ್ಟ್ ನಿಂದ ವೈಬ್ರೆಶನ್ ಉಂಟಾಗುತ್ತೆ. ಅದನ್ನ ತಪಾಸಣೆಗೂ ಒಂದು ಏಜೆನ್ಸಿಗೆ ಕೊಟ್ಟಿದ್ದೇವೆ. ಕೊರೊನಾ ಇರೊದ್ರಿಂದ ಬಂದಿಲ್ಲ. ವೈಬ್ರೆಷನ್ ಬಗ್ಗೆ ತಜ್ಞರು ಮಾಹಿತಿ ನೀಡಿದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ವಿಜಯಪುರ ಜಿಲ್ಲೆಯ ಅಲಿಯಾಬಾದ ಬಳಿ ವ್ಯಕ್ತಿ ಸಾವಿಗೀಡಾದ ಕಲ್ಲು ಗಣಿಕಾರಿಕೆ ಪ್ರದೇಶಕ್ಕೆ ಸಚಿವ ಮುರುಗೇಶ ನಿರಾಣಿ ಭೇಟಿ

ಗುರುವಾರ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ಹೊರ ಭಾಗದಲ್ಲಿ ಕಲ್ಲು ಗಣಿಗಾರಿಗಾಗಿ ಮಾಡಿದ ಸ್ಪೋಟದಿಂದಾಗಿ ಕಲ್ಲು ತೂರಿ ಬಂದು ರಸ್ತ ಬದಿಯಲ್ಲಿ ನಿಂತಿದ್ದ ಓರ್ವ ಸಾವಿಗೀಡಾಗಿ ಇಬ್ಬರಿಗೆ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ನಿರಾಣಿ ಭೇಟಿ ಪರಿಶೀಲನೆ ನಡೆಸಿದರು.

ಈ ಘಟನೆಯಲ್ಲಿ ಅಲಿಯಾಬಾದ್ ತಾಂಡಾದ ಮೋಹನ್ ನಾಯ್ಕ್ ಎಂಬುವವ ಸಾವನ್ನಪ್ಪಿದ್ದ. ಸಚಿನ ಮತ್ತು ಗಿರೀಶ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದವು. ಅಲಿಯಾಬಾದ್ ಗ್ರಾಮದ ಹೊರ ಭಾಗದಲ್ಲಿ ನಡೆದ ಘಟನಾ ಸ್ಥಳಕ್ಕೆ ಸಚಿವ ಭೇಟಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮೇಲ್ನೋಟಕ್ಕೆ ಅಕ್ರಮ ಗಣಿಗಾರಿಕೆ ಅಕ್ರಮ ಸ್ಫೋಟ ಮಾಡಿದ್ದು ಕಂಡು ಬಂದಿದೆ, ಇಡೀ ಘಟನೆ ವಿಚಾರವಾಗಿ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿವೆ. ಎಲ್ಲವನ್ನೂ ವೆರಿಫಿಕೇಷನ್ ಮಾಡಿದ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ತಿಳಿಸಿದರು.

ಅಶೋಕ ಸಾವಳಗಿ ಎಂಬುವವರಿಗೆ ಸೇರಿದ ಗಣಿಗಾರಿಕೆ ಪ್ರದೇಶದಲ್ಲಿ ಈ ಅವಘಡ ನಡೆದಿದೆ. ಇಂಥ ದುರ್ಘಟನೆ ನಡೆಯಬಾರದೆಂಬ ಉದ್ದೇಶದಿಂದ ಸ್ಕೂಲ್ ಆಫ್ ಮೈನಿಂಗ್ ತೆರೆಯಲು ನಿರ್ಧಾರ ಮಾಡಲಾಗಿದೆ. ಅಲ್ಲಿ ಸ್ಕಿಲ್‌ ಮೈನಿಂಗ್ ನಿಂದ ಹಿಡಿದು ಗೋಲ್ಡ್ ಮೈನಿಂಗ್ ನಡೆಸಲು ತರಬೇತಿ ನೀಡಲಾಗುತ್ತದೆ. ಮೈನಿಂಗ್ ಸ್ಕಿಲ್ ಇಲ್ಲದ ಕಾರಣ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ದುರ್ಘಟನೆ ನಡೆದಿದ್ದವು. ಸದ್ಯ ಇಲ್ಲಿ ನಡೆದ ಅಕ್ರಮ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾವಿಗೀಡಾದ ಹಾಗೂ ಗಾಯಾಳುಗಳಿಗೆ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ವಿಜಯಪುರ ಜಿಲ್ಲಾ ಮೈನ್ಸ್ ಅಸೋಶಿಯೇಷನ್ ರೂ. 20 ಲಕ್ಷ ಕೂಡಿಸಿ ನೀಡಲಿದೆ. ಮೃತನ ಕುಟುಂಬಕ್ಕೆ ಸರಕಾರದಿಂದ ರೂ. 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಪಿ. ಸುನೀಲ ಕುಮಾರ, ಎಸ್ಪಿ ಅನುಪಮ ಅಗ್ರವಾಲ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌