ವಿಜಯಪುರ: ರವಿವಾರ ರಜೆ ದಿನವಾಗಿರುವುದರಿಂದ ಬಹುತೇಕ ಅಧಿಕಾರಿಗಳು ರಜೆಯಲ್ಲಿರುವುದು ಮಾಮೂಲು. ಆದರೆ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತ್ರ ರಜೆ ದಿನವಾಗಿದ್ದರೂ ವಿಜಯಪುರ ನಗರದ ನಾನಾ ಸ್ಥಳಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ನಾನಾ ಯೋಜನೆಗಳಲ್ಲಿ ಮಂಜೂರಾದ ಕಾಮಗಾರಿಗಳನ್ನು ಪರಶೀಲನೆ ನಡೆಸಿದರು.
ಮೊದಲಿಗೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ನಡೆಯುತ್ತಿರುವ ಸಿಸಿ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿಯನ್ನು ವೀಕ್ಷಿಸಿದ ಅವರು, ಈ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆ ನೀಡಿದರು.
ನಂತರ ಅಂಬೇಡ್ಕರ್ ವೃತ್ತ ಮತ್ತು ಇನ್ನೊಂದು ಬದಿಗೆ ಫುಟಪಾತ್ ಕಾಮಗಾರಿಯನ್ನು ಕೈಗೊಳ್ಳಲು ಅಂದಾಜು ಪತ್ರಿಕೆ ತಯಾರಿಸಿ, ಅನುಮೋದನೆ ಪಡೆದು ಕಾಮಗಾರಿಯನ್ನು ಕೈಗೊಳ್ಳಲು ಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.
ಬಳಿಕ ಮಹಾನಗರ ಪಾಲಿಕೆಯ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಅವರು, ಈ ಕಟ್ಟಡಕ್ಕೆ ಬೇಕಾದ ಪಿಠೋಪಕರಣ ಮತ್ತು ಕಟ್ಟಡದಲ್ಲಿ ಎರಡು ಲಿಫ್ಟ್ ಗಳನ್ನು ಅಳವಡಿಸಲು, ಸೋಲಾರ್ ಪ್ಯಾನೆಲಿಂಗ್ ಅಳವಡಿಸಿಕೊಳ್ಳಲು ಸೂಚಿಸಿದರು. ಅಲ್ಲದೇ, ಹೊರಾಂಗಣ ಕಟ್ಟಡ ಅಭಿವೃದ್ಧಿ, ಕಟ್ಟಡ ಸುತ್ತಲೂ ಕಂಪೌಂಡ್ ಗೋಡೆ ಹಾಗೂ ತೆರೆದ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲು ಬೇಕಾದ ಅಂದಾಜು ಪತ್ರಿಕೆ ತಯಾರಿಸಿ ಕ್ರಿಯಾ ಯೋಜನೆಯ ಮಂಜೂರಾತಿ ಪಡೆಯಲು ಸೂಚಿಸಿದರು.
ನಂತರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿನ ಪ್ಯಾಕೇಜ್ ನಂ. 9ರಡಿ ವಾರ್ಡ ಸಂಖ್ಯೆ 21ರಲ್ಲಿರುವ ಗುರುಪಾದೇಶ್ವರ ನಗರದಲ್ಲಿ ಕೈಗೊಂಡ ಡಾಂಬರ್ ರಸ್ತೆ ಕಾಮಗಾರಿ ವೀಕ್ಷಿಸಿದರು. ರಸ್ತೆ ಕಾಮಗಾರಿಯನ್ನು ಕೈಗೊಂಡ ಸ್ಥಳಗಳಲ್ಲಿ ಮ್ಯಾನ್ ಹೋಲ್ ಚೇಂಬರ್ ಗಳನ್ನು ರಸ್ತೆ ಸರಿ ಸಮವಾಗಿ ಅಳವಡಿಸಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡುವಂತೆ ಸೂಚಿಸಿದರು.
ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ನಿರ್ವಹಿಸುತ್ತಿರುವ 1493 ಗುಂಪು ಮನೆಗಳ ಕಟ್ಟಡ ಕಾಮಗಾರಿಗಳ ಭೌತಿಕ ಪ್ರಗತಿ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಈ ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಈ ಕಾಮಗಾರಿಗಳ ಪರಿಶೀಲನೆ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಹಾಗೂ ಪಾಲಿಕೆಯ ಅಭಿಯಂತರರು, ಸಿಬ್ಬಂದಿ, ಸಿ ಎಲ್ ಪಿ ಸಿ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.