ಬೆಂಗಳೂರು: ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ.
ಈ ಕುರಿತು ನೀಡಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನಾಳೆ ಜು. 13ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ(scene of crime officer) ಹುದ್ದೆಗಳ ಆದೇಶ ಪ್ರತಿಯನ್ನು ಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ತನಿಖೆಗೆ ಈ ರೀತಿ ಹೊಸ ಪೊಲೀಸ್ ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆ. ಯಾವುದಾದರೂ ಒಂದು ಅಪರಾಧ ಕೃತ್ಯ ನಡೆದ ತತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಅಲ್ಲಿರುವಂಥ ಸಾಕ್ಷಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದುವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಮೊದಲು ಭೇಟಿ ನೀಡಲಿದೆ. ಆ ಸ್ಥಳದಲ್ಲಿನ ಎಲ್ಲ ಸಾಕ್ಷಾಧಾರಗಳನ್ನು ಸಂರಕ್ಷಣೆ ಮಾಡುವುದು, ನಂತರ ಸಾಕ್ಷಾಧಾರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡುವುದು, ತನಿಖಾಧಿಕಾರಿಗೆ ಆ ಸಾಕ್ಷಾಧಾರಗಳನ್ನು ಒದಗಿಸುವುದು ಸೇರಿದಂತೆ ಇತರ ಅವಶ್ಯ ಕರ್ತವ್ಯಗಳನ್ನು ಮಾಡಲಿದೆ. ಇದರಿಂದ ಅಪರಾಧಿಗಳನ್ನು ಅತ್ಯಂತ ಶ್ರೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಎಲ್ಲ ಕೆಲಸ ಕಾರ್ಯಗಳನ್ನು ಈ ಅಧಿಕಾರಿಗಳು ಮಾಡಲು ಇದು ನೆರವಾಗಲಿದೆ. ಈ ಹೊಸ ಹುದ್ದೆ ಸೃಷ್ಠಿಯಿಂದ ಬೇಗ ಅಪರಾಧಿಗಳ ಪತ್ತೆ ಮತ್ತು ಅಪರಾಧ ನಿಯಂತ್ರಣಕ್ಕೆ ಸಾಧ್ಯವಾಗಲಿದೆ. ಈ ವ್ಯವಸ್ಥೆಯ ಪ್ರಮುಖವಾಗಿ ವಿದೇಶಗಳಲ್ಲಿ ಹೆಚ್ಚಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರಥಮ ಹಂತದಲ್ಲಿ 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದು, ಜು.13 ರಂದು ಈ ಸಂಬಂಧ ಅಧಿಕೃತವಾಗಿ ಸರಕಾರಿ ಆದೇಶವನ್ನು ಗೃಹ ಇಲಾಖೆಗೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪೊಲೀಸರ ಆರೋಗ್ಯ ಕಾಪಾಡುವ ಆರೋಗ್ಯ ಭಾಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಪೊಲೀಸ್ ಸಿಬ್ಬಂದಿಗೆ ನೀಡಲು ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಅಲ್ಲದೇ, ಅದೇ ರೀತಿ ಪೊಲೀಸರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ವಿದ್ಯಾನಿಧಿ – 2 ಯೋಜನೆಗೆ ಸಿಎಂ ಚಾಲನೆ ಕೊಡಲಿದ್ದಾರೆ.
ಇದಷ್ಟೇ ಅಲ್ಲದೆ ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ಇತರ ಪೊಲೀಸ್ ಸೇವಾ ಪದಕಗಳನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಧಾನ ಮಾಡಲಿದ್ದಾರೆ.
ಈ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡಿರುವ ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.