ಕಾಲಘಟಕ್ಕೆ ತಕ್ಕಂತೆ ಆರೋಗ್ಯಪೂರ್ಣ ಸ್ಪರ್ಧೆಯ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸಬೇಕು- ಎಂ. ಬಿ. ಪಾಟೀಲ

ವಿಜಯಪುರ: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಆರೋಗ್ಯ ಪೂರ್ಣ ಸ್ಪರ್ಧೆಯ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಬಿ ಎಲ್‌ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ.

ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ನೂತನ ಉಪಕುಲಪತಿಗಳಾಗಿ ಡಾ. ಆರ್. ಎಸ್. ಮುಧೋಳ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಕಾಯಿಲೆ ಎರಡನೇ ಅಲೆ ಸಂದರ್ಭದಲ್ಲಿ ಬಿ ಎಲ್ ಡಿ ಇ ವಿಶ್ವವಿದ್ಯಾಲಯ ಮಾಡಿದ ಸಾಧನೆ ದೇಶದ ಗಮನ ಸೆಳೆದಿದೆ. ಮಹಾನಗರಗಳಿಂದ, ಎಲ್ಲ ಸಂಪರ್ಕ ಸೌಕರ್ಯಗಳಿಂದ ವಂಚಿತವಾಗಿರುವ ಪ್ರದೇಶದಲ್ಲಿರುವ ವಿಜಯಪುರದ ನಮ್ಮ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಈ ಎಲ್ಲ ಸವಾಲುಗಳನ್ನು ಮೀರಿ, ಜಾಗತೀಕ ಮಟ್ಟದಲ್ಲಿ ನಾವು ಮುನ್ನಡೆಯಬೇಕಿದೆ ಎಂದು ಹೇಳಿದರು.

ನೂತನ ಉಪಕುಲಪತಿಗಳಾಗಿ ಪೂರ್ಣಾವಧಿಗೆ ಅಧಿಕಾರ ವಹಿಸಿಕೊಂಡ ಡಾ. ಆರ್. ಎಸ್. ಮುಧೋಳ ಮಾತನಾಡಿ, ಸಂಸ್ಥೆಯ ಹಿರಿಯರು, ಹಿಂದಿನ ಕುಲಪತಿಗಳ ಆಶಯದಂತೆ ಬಿ ಎಲ್ ಡಿ ಇ ವಿಶ್ವವಿದ್ಯಾಲಯವನ್ನು ಉನ್ನತ ವಿಶ್ವವಿದ್ಯಾಲಯವನ್ನಾಗಿ ರೂಪಿಸಲು ಎಲ್ಲರ ಸಹಕಾರವನ್ನು ಪಡೆದು ಮುನ್ನೆಡೆಯಬೇಕಿದೆ. ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ನಾವು ರೂಪಿಸಿಕೊಳ್ಳಬೇಕಿದೆ. ಜಾಗತೀಕವಾಗಿ ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಆಗು-ಹೋಗುಗಳನ್ನು ಗಮನದಲ್ಲಿರಿಸಿ, ಅದಕ್ಕೆ ತಕ್ಕಂತೆ ನಾವು ನೀತಿ ನಿರೂಪಣೆಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಪ್ರಧಾನ ಕಾರ್ಯದರ್ಶಿ ಜಿ. ಕೆ. ಪಾಟೀಲ, ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಬಿ ಎಲ್ ಡಿ ಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಪ್ರಾಧ್ಯಾಪಕರಾದ ಡಾ. ಕುಶಾಲ ದಾಸ, ಡಾ. ಅರುಣ ಇನಾಮದಾರ, ರಿಜಿಸ್ಟಾರ್ ಡಾ. ಜೆ. ಜಿ. ಅಂಬೇಕರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌