ವಿಜಯಪುರ: ಅಂಚೆ ಕಚೇರಿ ಸಿಬ್ಬಂದಿ ಸೇವಾ ಮನೋಬಾವ ಹೆಚ್ಚಿಸಿಕೊಂಡು ಸಮಾಜ ಮುಖಿಯಾಗಿ ಸೇವೆ ಸಲ್ಲಿಸಬೇಕು ಎಂದು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಕರೆ ನೀಡಿದ್ದಾರೆ.
ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಿಜಯ ಕಾಲೇಜು ಅಂಚೆ ಕಚೇರಿ ಹೆಸರನ್ನು ಬಿ ಎಲ್ ಡಿ ಇ ಎ ಕ್ಯಾಂಒಸ್ ಪೋಸ್ಟ್ ಆಫೀಸ್ ಆಗಿ ಮರು ನಾಮಕರಣ ಮತ್ತು ಮೇಘದೂತ್ ಪೋಸ್ಟ್ ಕಾರ್ಡ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಸ್ವಂತ ಅನುಭವದ ಮೇಲೆ ಹೇಳುತ್ತಿದ್ದೇನೆ. ಗ್ರಾಹಕರೆ ದೇವರು ಎಂಬುದು ವರ್ತನೆಯಲ್ಲಿರಬೇಕು. ಸರಕಾರದ ಪರವೂ ಉನ್ನತ ಚಿಂತನೆ ಉಳ್ಳವರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದೆ. ಸಾಧ್ಯವಾದಷ್ಟು ಮಾನವೀಯತೆ ದೃಷ್ಠಿಯಿಂದ ಕೆಲಸ ಮಾಡಬೇಕು. ಅಂಚೆ ಕಚೇರಿಗೆ ಬರುವ ಗ್ರಾಹಕರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮೂಲಕ ಗ್ರಾಹಕರ ಮನಗೆಲ್ಲುವ ಕೆಲಸ ಮಾಡಬೇಕು. ಶತಮಾನದ ಇತಿಹಾಸವುಳ್ಳ ಇಂಥ ಇಲಾಖೆಗಳಲ್ಲಿನ ಸಿಬ್ಬಂದಿ ಸೇವೆಯನ್ನು ಇನ್ನೂ ಉತ್ತಮ ಪಡಿಸಿಕೊಳ್ಳುವ ಮೂಲಕ ಜನರಿಗೆ ನೆರವಾಗಬೇಕು ಎಂದು ತಿಳಿಸಿದರು.
ಎಂ. ಬಿ. ಪಾಟೀಲ ಅವರು, ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಸರಕಾರಿ ಬ್ಯಾಂಕ್ ಮತ್ತು ಅಂಚೆ ಕಚೇರಿ ತೆರೆಯುವ ಮೂಲಕ ಸರಕಾರಗಳಿಗೂ ನೆರವಾಗುತ್ತಿದ್ದಾರೆ. ದಿ. ಬಿ. ಎಂ. ಪಾಟೀಲ ಮತ್ತು ಬಂಥನಾಳ ಶಿವಯೋಗಿಗಳು ಹಾಗೂ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಕಟ್ಟಿರುವ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಚೆ ಇಲಾಖೆ ವಿಜಯಪುರ ಅಧೀಕ್ಷಕ ಕೆ. ರಘುನಾಥ ಸ್ವಾಮಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಮೇಘದೂತ ಅಂಚೆಪತ್ರ ಬಿಡುಗಡೆ ಮಾಡಲಾಗುತ್ತಿದೆ. ಬಿ ಎಲ್ ಡಿ ಇ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮ ತಮಗೆ ಸಂತಸ ತಂದಿದೆ. ವಿಜಯ ಕಾಲೇಜು ಹೆಸರು ಈಗ ಬಿ ಎಲ್ ಡಿ ಇ ಕ್ಯಾಂಪಸ್ ಅಂಚೆ ಕಚೇರಿ ಎಂದು ಮರುನಾಮಕರಣ ಮಾಡಲಾಗಿದೆ. ಇದು ಕಷ್ಟದ ಕೆಲಸವಾಗಿತ್ತು. ಬಿ ಎಲ್ ಡಿ ಇ ಸಂಸ್ಥೆಯವರು ಹೆಸರು ಬದಲಾವಣೆಗೆ ಆಗ್ರಹಿಸಿ ಎರಡು ಹೆಸರು ಸೂಚಿಸಿದ್ದರು. ಈ ಹೆಸರಿನಲ್ಲಿ ಬಿ ಎಲ್ ಡಿ ಇ ಕ್ಯಾಂಪಸ್ ಹೆಸರಿಡಲು ಅಂಚೆ ಇಲಾಖೆ ಮೇಲಾಧಿಕಾರಿಗಳು ಒಪ್ಪಿಗೆ ಸೂಚಿಸಿದರು. 1963 ರಲ್ಲಿ ಇಲ್ಲಿ ಅಂಚೆ ಕಚೇರಿ ಆರಂಭವಾಗಿ 68 ವರ್ಷಗಳ ನಂತರ ಈಗ ಹೆಸರು ಬದಲಾಗಿದೆ. ಬಿ ಎಲ್ ಡಿ ಇ ಕ್ಯಾಂಪಸ್ ಅಂಚೆ ಕಚೇರಿಯಲ್ಲಿ ವಿಶೇಷವಾಗಿ ಆಧಾರ ಕಾರ್ಡ್ ಸೌಲಭ್ಯ ಒದಗಿಸಲಾಗುತ್ತಿದೆ. ಈಗ ಮೊಬೈಲ್ ನಂಬರ್ ಅಪಡೇಟ್ ಮಾಡಲಾಹುತ್ತಿದೆ ಎಂದು ತಿಳಿಸಿದರು.
ಬಿ ಎಲ್ ಡಿ ಇ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಮಾತನಾಡಿ, ಮೇಘದೂತ ಅಂಚೆ ಕಾರ್ಡ್ ಜಾಹೀರಾತು ಸಲುವಾಗಿ ಒಪ್ಪಿಗೆ ತರಲು ಹೋದಾಗ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಒಂದು ಕ್ಷಣವೂ ಯೋಚಿಸದೆ ಒಪ್ಪಿಗೆ ಸೂಚಿಸಿದರು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗಲು ಅಂಚೆ ಕಚೇರಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಕಚೇರಿಯ ಹೊರಗಡೆ ಪಟ್ಟಿ ಮಾಡಿ ಸಾರ್ವಜನಿಕರು ವೀಕ್ಷಿಸಲು ಬೋರ್ಡ್ ಹಾಕಬೇಕು. ಅಂಚೆ ಕಚೇರಿಗೆ ಬೇಕಾಗುವ ಸಕಲ ಸಹಾಯಗಳನ್ನು ಮಾಡಲು ಬಿ. ಎಲ್. ಡಿ. ಇ ಸಂಸ್ಥೆ ಸದಾ ಸಿದ್ಧವಿದೆ ಎಂದು ಡಾ. ಆರ್. ವಿ. ಕುಲಕರ್ಣಿ ತಿಳಿಸಿದರು. ‘
ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಡಾ. ಅರುಣ ಇನಾಮದಾರ, ಪದವಿ ಕಾಲೇಜುಗಳು ಆಡಳಿತಾಧಿಕಾರಿ ಕೆ. ಜಿ. ಪೂಜಾರ, ಉಪಕುಲಸಚಿವರಾದ ಸತೀಶ ಪಾಟೀಲ, ಬಿ ಎಲ್ ಡಿ ಇ ಸಂಸ್ಥೆಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ), ಎಸ್. ಬಿ. ಪಾಟೀಲ, ವಿವೇಕ ನಿಂಬರಗಿ, ಪಿ. ಎನ್. ಯರಿಜೋಳ, ಎಸ್. ಎಲ್. ಪಾಟೀಲ, ಎಸ್. ಎನ್. ಜಿನ್ನಾಡ ಮುಂತಾದವರು ಉಪಸ್ಥಿತರಿದ್ದರು.