16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನ್ನ ಕನಸಿನ ಕೂಸು- ಇದರ ಬಗ್ಗೆ ಮಾತನಾಡಲು ಯಾರ ಅನುಮತಿ ಬೇಕಿಲ್ಲ- ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 16 ಕೆರೆಗಳನ್ನು ತುಂಬಿಸುವ ಯೋಜನೆ ನನ್ನ ಕನಸಿನ ಕೂಸು. ಈ ಯೋಜನೆಯ ಬಗ್ಗೆ ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗಲೂ ಮಾತನಾಡಿದ್ದೇನೆ. ಮುಂದೆಯೂ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ತಿಡಗುಂದಿ ಅಕ್ವಾಡಕ್ಟ್ ಮೂಲಕ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲ‌ ಮತ್ತು ಪರಿಷ್ಕೃತ ಯೋಜನೆಯಲ್ಲಿ ಇರಲಿಲ್ಲ. ಈ ಯೋಜನೆಯಲ್ಲಿ ಸರಕಾರವಾಗಲಿ ಅಥವಾ ಅಧಿಕಾರಿಗಳದ್ದಾಗಲಿ ಪಾತ್ರವಿಲ್ಲ. ನಾಗಠಾಣ ಮತ್ತು‌ ಇಂಡಿ ಮತಕ್ಷೇತ್ರಗಳ ಜನರ ಅನುಕೂಲಕ್ಕಾಗಿ ಸರಕಾರದಲ್ಲಿ ಈ ಯೋಜನೆ ಜಾರಿಗೆ ಒಪ್ಪಿಗೆ ಕೊಡಿಸಿದ್ದೆ. ಕಳೆದ ಒಂದು ವರ್ಷದಿಂದ ಬಾಕಿಯಿದ್ದ ಈ ಯೋಜನೆಯ ಬಗ್ಗೆ ಜು. 9 ರಂದು ಬೆಂಗಳೂರಿನಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿ ಮೊದಲೇ ತಿಳಿಸಿದಂತೆ ಮನವಿ ಪತ್ರ ಸಲ್ಲಿಸಿದೆ. ನೀರಾವರಿ ಯೋಜನೆಗಳ ಎರಡು ಬೇಡಿಕೆಗಳನ್ನು ಸಿಎಂ ಮುಂದಿಟ್ಟಿದ್ದೆ. 16 ಕೆರೆಗಳಿಗೆ ನೀರು ತುಂಬಿಸುವ ರೂ. 140 ಕೋ. ಯೋಜನೆ ಮತ್ತು ಹಳ್ಳಕೊಳ್ಳಗಳಿಗೆ ನೀರು ಹರಿಸುವ ರೂ. 60 ಕೋ. ವೆಚ್ಚದ ಯೋಜನೆಗಳಿದ್ದವು. ಆಗ ಸಿಎಂ ಯಾವುದು ಮೊದಲು ಆಗಬೇಕು ಎಂದಾಗ ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಎಂದು‌ ಕೇಳಿದೆ. ಅದೇ ದಿನ ಮಧ್ಯಾಹ್ನ ಸಿಎಂ ಈ ಕುರಿತು ಆದೇಶ ಹೊರಡಿಸಿದ್ದಾರೆ. ಇದು ಎಂ. ಬಿ. ಪಾಟೀಲ ಕೂಸು ಎಂದು ಮಾಜಿ ಸಚಿವರು ಹೆಮ್ಮೆಯಿಂದ ಹೇಳಿದರು.

ತಾಂತ್ರಿಕವಾಗಿ ಹೇಳಬೇಕೆಂದರೆ ಗೆಜೆಟ್ ನೋಟಿಫಿಕೇಶನ್ ಆಗುವ ಮುಂಚೆಯೇ 1000 ಕಿ. ಮೀ. ಪೂರ್ವ ತಯಾರಿಯಾಗಿ ಮುಖ್ಯ ಕಾಲುವೆ, ಉಪಕಾಲುವೆ, ಹೆಡ್ ವರ್ಕ್ ಮಾಡಿದ್ದೇನೆ. ಈ ಮುಂದಾಲೋಚನೆಯನ್ನು ಇಟ್ಟುಕೊಂಡು ರೂ. 10 ರಿಂದ 15 ಸಾವಿರ ಕೋ. ಖರ್ಚು ಮಾಡಿ ಹೆಡ್ ವರ್ಕ್, ಕೆನಾಲ್ ನೆಟವರ್ಕ್, ಕಾಲುವೆಗಳು, ಅಕ್ವಾಡಕ್ಟ್ ನಿರ್ಮಿಸಿದ್ದೇನೆ. ಇದರ ಫಲವಾಗಿ ವಿಜಯಪುರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿ ಬಂದ್ ಆಗಿದ್ದ ಕೊಳವೆ ಭಾವಿಗಳು ಪುನಶ್ಚೇತನಗೊಂಡಿವೆ. ಇಲ್ಲದಿದ್ದರೆ ಗೆಜೆಟ್ ನೋಟಿಫಿಕೇಶನ್ ಗಾಗಿ ಇನ್ನೂ 20 ವರ್ಷ ಕಾಯಬೇಕಿತ್ತು ಎಂದು ಅವರು ತಿಳಿಸಿದರು.

ಯುಕೆಪಿ-2 ರೂ. 17200 ಕೋ. ಬಿಜೆಪಿ ಸರಕಾರ ತಾತ್ವಿಕ ಒಪ್ಪಿಗೆ ಮಾತ್ರ ನೀಡಿದೆ. 2016 ರಲ್ಲಿ ನಾನು ಡಿಪಿಆರ್ ತಯಾರಿಸಿ ಬಿಟ್ಟು ಹೋದ ಸ್ಥಳಗಳಿಗೂ ನೀರಾವರಿ ಸಾಮರ್ಥ್ಯವನ್ನು ಶೇ. 115 ದಿಂದ ಶೇ. 100 ಕ್ಕೆ ಇಳಿಸಿ 10 ಟಿಎಂಸಿ ನೀರು ಉಳಿಸಿ 1.25 ಲಕ್ಷ ಎಕರೆ ಹೆಚ್ಚುವರಿ ನೀರಾವರಿ ಸೌಲಭ್ಯ ಒದಗಿಸಲು ಕ್ರಮ‌ ಕೈಗೊಂಡೆ. ಇದು ನನ್ನ ಕೊಡುಗೆ. ಅಂದು ರೂ. 51048 ಕೋ. ಕ್ಯಾಬಿನೇಟ್ ನಲ್ಲಿ ಮಂಜೂರಾತಿ ಒದಗಿಸಲು ಗುರಿ ಇಟ್ಟುಕೊಂಡಿದ್ದೆ. ಇಲ್ಲದಿದ್ದರೆ ಮನೆಗೆ ಹೋಗುತ್ತೇನೆ ಎಂದು ಖಾಸಗಿಯಾಗಿ ಅಧಿಕಾರಿಗಳ ಬಳಿ ಹೇಳಿದ್ದೆ. ಇದನ್ನು ಅಂದಿನ ಸಿಎಂ ಸಿದ್ಧರಾಮಯ್ಯ ಮತ್ತು ಸಂಪುಟದ ಸಹೋದ್ಯೋಗಿಗಳು ಯಾವುದೇ ಪ್ರಶ್ನೆ ಮಾಡದೇ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು. ಈಗ ಯುಕೆಪಿ 3ನೇ ಹಂತದ ಕಾಮಗಾರಿಗಳು ಇದೇ ಮಂಜೂರಾತಿ ಯೋಜನೆಗಳಡಿ ನಡೆಯುತ್ತಿವೆ. ತಿಡಗುಂದಿ ಶಾಖಾ ಕಾಲುವೆ 60 ಕಿ. ಮೀ. ಯಲ್ಲಿ 54 ಕಿ. ಮೀ. ಅನುಮೋದನೆಯಾಗಿದೆ. ಇದರಿಂದ 25000 ಹೆಕ್ಟೇರ್ ಗೆ ನೀರಾವರಿ ಒದಗಿಸಲಿದೆ. ತಿಡಗುಂದಿ ಶಾಖಾ ಕಾಲುವೆ ವಿಜಯಪುರ ನಗರದ ಮೂಲಕ ನಿರ್ಮಾಣ ಮಾಡಬೇಕಿತ್ತು. ಆದರೆ, ಇದರಿಂದ ವಿಜಯಪುರ ನಗರದ ಪ್ರಾಚೀನ ಸ್ಮಾರಕಗಳು, ವಸತಿ ಮತ್ತು ವಾಣಿಜ್ಯ ಪ್ರದೇಶಗಳು, ರೇಲ್ವೆ ಮಾರ್ಗಗಳಿಗೆ ಹಾನಿಯಾಗುತ್ತಿತ್ತು. ಈ ಹಾನಿಯನ್ನು ತಪ್ಪಿಸಲು ಎಷ್ಯಾದ ಅತ್ಯಂತ ದೊಡ್ಡದಾದ 15 ಕಿ. ಮೀ. ತಿಡಗುಂದಿ ಅಕ್ವಾಡಕ್ಟ್ ಅಂದರೆ ವಯಾಡಕ್ಟ್ ಮಾಡಿದೆವು ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಅಷ್ಟೇ ಅಲ್ಲ, ಅಂದು ಇಂಡಿ ತಾಲೂಕಿಗೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸಲು ಎರಡು ತಂಡ ರಚಿಸಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗುಜರಾತ ಮತ್ತು ಮಧ್ಯ ಪ್ರದೇಶಕ್ಕೆ ಕಳುಹಿಸಿದ್ದೆ. ನಾಗಠಾಣ ಬ್ರ್ಯಾಂಚ್ ಕೆನಾಲ್ ಮತ್ತು ತಿಡಗುಂದಿ ಬ್ರ್ಯಾಂಚ್ ಕೆನಾಲ್ ಓವರಲ್ಯಾಪ್ ಆಗದಂತೆ ಕ್ರಮ ಕೈಗೊಂಡಿದ್ದೆ. ಗೆಜೆಟ್ ನೋಟಿಪಿಕೇಶನ್ ಇಲ್ಲದಿದ್ದರೂ ಬಹುತೇಕ ಕಾಮಗಾರಿ ಮಾಡಿದೆ. ಚಡಚಣ, ಹೊರ್ತಿ ಭಾಗಕ್ಕೆ ನೀರು ಒದಗಿಸಲು ಕೆಲಸ ಮಾಡಿದೆ ಎಂದು ಬಬಲೇಶ್ವರ ಕಾಂಗ್ರೆಸ್ ಶಾಸಕರೂ ಆಗಿರುವ ಎಂ. ಬಿ. ಪಾಟೀಲ ತಿಳಿಸಿದರು.

ಈ ಯೋಜನೆಯಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದಾಗಲಿ, ಕೀಳು ರಾಜಕಾರಣ ಮಾಡುವುದು ನನಗೆ ಅಗತ್ಯವಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಲು ನನಗೆ ಹಕ್ಕಿದೆ. ಕಾವೇರಿ, ಕೃಷ್ಣಾ, ಮೇಕೆದಾಟು ಯೋಜನೆಗಳಲ್ಲಿ ನನ್ನ ಕೊಡುಗೆ ಇದೆ. ನನಗೆ ನೀರಾವರಿ ವಿಚಾರದಲ್ಲಿ ಸಚಿವರಾಗಿದ್ದಾಗಷ್ಟೇ ಅಲ್ಲ ಬೇರೆ ಸಮಯದಲ್ಲೂ ಮಾತನಾಡಲು ಹಕ್ಕಿದೆ. ರಾಜ್ಯದ ನೆಲ, ಜಲ ವಿಚಾರಗಳ ಬಗ್ಗೆ 2004 ರಿಂದ ಮಾತನಾಡುತ್ತಿದ್ದೇನೆ ಇಂದೂ ಮಾತನಾಡುತ್ತೇನೆ ಮುಂದೆಯೂ ಮಾತನಾಡುತ್ತೇನೆ. ಇದಕ್ಕೆ ಯಾರ ಅನುಮತಿ ಬೇಕಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆರಾಮವಾಗಿ ಇರಬಹುದಿತ್ತು ಆದರೆ, ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಅಂದು ಉಮಾಭಾರತಿ ಅವರ ಬಳಿ ಹೋಗಿ ಅಣೆಕಟ್ಟುಗಳ ಅಭಿವೃದ್ಧಿಗೆ ಒಪ್ಪಿಗೆ ಪಡೆದಿರುವುದೂ ಇದೆ. ನಾನು ಮಾಡಿರುವ ಯೋಜನೆಗಳ ಬಗ್ಗೆ ಮಾತನಾಡಬಹುದು ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಶಿವಾನುಭವ ಮಾಸ ಪತ್ರಿಕೆ ಮರುಮುದ್ರಣದ ಬಗ್ಹೆ ಈಗ ಬೇಡಿಕೆ ಇಟ್ಟಿದ್ದೇನೆ. ಅದೂ ಕೂಡ ಆಗಲಿದೆ. ರೇವಣ ಸಿದ್ಧೇಶ್ಬರ ಏತ ನೀರಾವರಿ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. 3.73 ಟಿಎಂಸಿ ತಿಡಗುಂದಿ ಅಕ್ವಾಡಕ್ಟ್ ಯೋಜನೆಯಲ್ಲಿ ಸುಮಾರು 2.50 ಟಿಎಂಸಿ ನೀರು ರೇವಣ ಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸಿಗಲಿದೆ. ಈ ಯೋಜನೆಗೆ ರೂ. 2400 ಕೋ. ಬೇಕು. ಈ ಯೋಜನೆಗೂ ನಾನು ಬೆಂಬಲ ಸೂಚಿಸುತ್ತೇನೆ. ನೀರಾವರಿ ವಿಚಾರದಲ್ಲಿ ಹಿಂದೆ, ಇಂದು, ಮುಂದೆಯೂ ಮಾತನಾಡುತ್ತೇನೆ ಎಂದು ತಿಳಿಸಿದ ಎಂ. ಬಿ. ಪಾಟೀಲ, ನಾನೆನೂ ತಲಾ ರೂ. 400 ಕೋ. ವೆಚ್ಚದ ಬಬಲೇಶ್ವರ ವಿತರಣಾ ಕಾಲುವೆ, ತುಬಚಿ ಬಬಲೇಶ್ವರ ಏತ ನೀರಾವರಿ ಕೆಲಸ ತೆಗೆದುಕೊಂಡು ಸಿಎಂ ಬಳಿ ಹೋಗಿಲ್ಲ ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌