ವಿಜಯಪುರ: ಗ್ರಾಮಗಳ ಅಭಿವೃದ್ಧಿಗೆ ಗ್ರಾ. ಪಂ. ಸದಸ್ಯರು ಕೇವಲ ಶಾಸಕರನ್ನು ಅವಲಂಬಿಸದೇ ತಾವೂ ಕೂಡ ಪ್ರಾಮಾಣಿಕವಾಗಿ ಕೈಜೋಡಿಸಿದರೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಆಗುತ್ತವೆ ಎಂದು ವಿಜಯಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ ತಿಕೋಟಾ ತಾಲೂಕಿನ ಗ್ರಾ. ಪಂ. ನೂತನ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೊರೊನಾ ಕಾಯಿಲೆ ಅಥವಾ ಇನ್ನಿತರ ಕಾಯಿಲೆಗಳನ್ನು ಹೋಗಲಾಡಿಸಲು ಗ್ರಾಮಗಳ ಸ್ವಚ್ಚತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕುಡಿಯುವ ನೀರಿನ ಸೌಲಭ್ಯ ಹಾಗೂ ಪ್ರತಿ ಮನೆ-ಮನೆಗೆ ಶೌಚಾಲಯದ ವ್ಯವಸ್ಥೆ ಹೀಗೆ ಹಲವು ಸರಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಕೊಂಡು ಯೋಜನೆಗಳನ್ನು ಪೂರ್ಣಗೊಳಿಸಬೇಕು. ಇಂಥ ಸಂದರ್ಭದಲ್ಲಿ ಅಡಚಣೆಗಳು ಎದುರಾದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ಹೇಳಿದರು
ಕೊರೊನಾ ಮೂರನೇ ಅಲೆಗೆ ಬರಲಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಾಯಿಲೆಯನ್ನು ತಡೆಯಲು ನಮ್ಮಿಂದಲೇ ಸಾಧ್ಯ. ಅದಕ್ಕೆ ನಾವೆಲ್ಲರೂ ಜಾಗೃತರಾಗಬೇಕು. ಗ್ರಾ. ಪಂ. ಸದಸ್ಯರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಸುನೀಲಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೈಬೂಬ ಜಿಲಾನಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಐ. ಎ. ಬಿರಾದಾರ, ರೇಖಾ ಪವಾರ, ಪದ್ಮಿನಿ ಬಿರಾದಾರ, ರಾಜಶ್ರೀ ತುಂಗಳ, ರಾಜಶ್ರೀ ದಶವಂತ ಸೇರಿದಂತೆ ಎಲ್ಲ ಗ್ರಾ. ಪಂ. ಅಧಿಕಾರಿಗಳು, ಸುರೇಶ ಕಳ್ಳಿಮನಿ ಮುಂತಾದವರು ಉಪಸ್ಥಿತರಿದ್ದರು.