ಬೆಳಗಾವಿ: ಕಾಂಗ್ರೆಸ್ಸಿನಲ್ಲಿ ನಾನೇ ಪ್ರಭಾವಿ ನಾಯಕ ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದನ್ನು ಜನರು ತೀರ್ಮಾನ ಮಾಡಬೇಕು ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನೇ ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಜನ ಇದನ್ನು ತೀರ್ಮಾನ ಮಾಡಬೇಕು. ನಾನೇ ನಾಯಕ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹೋರಾಟ 12ನೇ ಶತಮಾನದಲ್ಲಿ ಆರಂಭ ಆಗಿದೆ. ಈ ಬಗ್ಗೆ ಇಂದು ನಾನು ಚರ್ಚೆ ಮಾಡಲ್ಲ. ಹೋರಾಟದ ಬಗ್ಗೆ ಇಂದು ನಾನು ಮಾತನಾಡಲ್ಲ ಎಂದು ತಿಳಿಸಿದರು.
2023ರಲ್ಲಿ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಕುರಿತು ಮಾತನಾಡಿದ ಅವರು, ಲಿಂಗಾಯತರಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ದೊಡ್ಡ ನಾಯಕ. ಕಾಂಗ್ರೆಸ್ ಪಕ್ಷದಲ್ಲಿಯೂ ಅನೇಕ ಹಿರಿಯ ಲಿಂಗಾಯತ ನಾಯಕರು ಇದ್ದಾರೆ. ವೀರೇಂದ್ರ ಪಾಟೀಲ ಇದ್ದಾಗ ಕಾಂಗ್ರೆಸ್ 160 ಸ್ಥಾನ ಗೆದ್ದಿತ್ತು. ಅವರ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ವಾಪಸ್ ಮತ್ತೆ ಸಮುದಾಯವನ್ನು ಪಕ್ಷದ ಕಡೆ ಸೆಳೆಯಲು ಪ್ರಯತ್ನ ಮಾಡುತ್ತೇವೆ. ಸಾಮೂಹಿಕ ನಾಯಕತ್ವದಲ್ಲಿ ಪ್ರಯತ್ನ ಮಾಡುತ್ತೇವೆ. ಯಾರು ಸ್ವಯಂ ಘೋಷಿತ ಸಿಎಂ ಆಗಲು ಸಾಧ್ಯವಿಲ್ಲ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು, ನಂತರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗಲು ಒಂದು ಪದ್ಧತಿ ಇದೆ. ಅಧಿಕಾರಕ್ಕೆ ಬರುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಪ್ರತಿನಿದ್ಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಎಂ. ಬಿ. ಪಾಟೀಲ ಅವರು, ಈ ಬಗ್ಗೆ ಹೈಕಮಾಂಡ್ ಗೆ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ್ ಗಮನಕ್ಕೆ ತರಲಾಗಿದೆ. ರಾಹುಲ ಗಾಂಧಿ, ಸೋನಿಯಾ ಗಾಂಧಿ ಜತಗೆ ಸಹ ಚರ್ಚೆ ನಡೆಸಲಾಗಿದೆ. ವೀರೇಂದ್ರ ಪಾಟೀಲ ಕಾಲದ ಕಾಂಗ್ರೆಸ್ ಗತವೈಭವ ಮರಳಿ ತರಲು ಪ್ರಯತ್ನ ಮಾಡಲಾಗುವುದು. ಪ್ರಾತಿನಿಧ್ಯ ಸಿಗಲೇಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.