ಬಸವ ನಾಡಿನಲ್ಲಿ ಕೊರೊನಾ ಆತಂಕದ ಮಧ್ಯೆಯೂ ಎಸ್ ಎಸ್ ಎಲ್ ಪರೀಕ್ಷೆಗೆ ಜಿಲ್ಲಾಡಳಿತ ಸನ್ನದ್ಧ

ವಿಜಯಪುರ: ಕೊರೊನಾ ಆತಂಕದ ನಡುವೆಯೇ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ಬಸವ ನಾಡು ಸಜ್ಜಾಗಿದೆ. ಈ ಬಾರಿಯೂ ಪರೀಕ್ಷೆಗಳು ಸುಸೂತ್ರವಾಗಿ ನಡೆಸಲು ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪರೀಕ್ಷಾ ಕೇಂದ್ರಗಳ ಆಡಳಿತ ಮಂಡಳಿಗಳೂ ಕೂಡ ತಂತಮ್ಮ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಯನ್ನು ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಕೈ ಜೋಡಿಸಿವೆ.

ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಸೋಮವಾರ ಜು. 19 ರಿಂದ ಜು. 22ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಸರಕಾರದ ಕೊರೊನಾ ಮಾರ್ಗಸೂಚಿಯಂತೆ ಗುಮ್ಮಟ ನಗರಿ ವಿಜಯಪುರದಲ್ಲಿಯೂ ಸಿದ್ಧತೆಗಳು ಪೂರ್ಣಗೊಂಡಿವೆ. ವಿಜಯಪುರ ನಗರದ ರವೀಂದ್ರನಾಥ ಠ್ಯಾಗೋರ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆಗಳು ಬಹುತೇಕ ಮುಗಿದಿವೆ. ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳ ನಂಬರ್ ಹಾಕುವದು, ಬ್ಲಾಕ್ ನಂಬರ್, ಬೋರ್ಡುಗಳ ಮೇಲೆ ಮೇಲೆ ಪರಿಕ್ಷಾರ್ಥಿಗಳ ವಿವರ ನಮೂದಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.

ವಿಜಯಪುರ ನಗರದ ರವೀಂದ್ರನಾಥ ಠಾಗೋರ ಪರೀಕ್ಷಾ ಕೇಂದ್ರದ ಬಳಿ ಅನವಶ್ಯಕ ಜನ ಬಾರದಂತೆ ಬಂದೋಬಸ್ತ್ ವ್ಯವಸ್ಥೆ

ವಿಜಯಪುರ ನಗರದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ರವೀಂದ್ರನಾಥ ಠ್ಯಾಗೋರ್ ಪರೀಕ್ಷಾ ಕೇಂದ್ರದ ಸುತ್ತಮುತ್ತ ಬ್ಯಾರಿಕೇಡ್ ಹಾಕಲಾಗಿದೆ. ಪರೀಕ್ಷಾ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕೇಂದ್ರದೊಳಗೆ ಪ್ರವೇಶಿಸುವಂತೆ ಮತ್ತು ಪರೀಕ್ಷೆ ಸುಸೂತ್ರವಾಗಿ ನಡೆಯಲು ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಈಗಲೇ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಜು. 19 ಸೋಮವಾರ ಮೊದಲ ದಿನ ಗಣಿತ, ಸಾಮಾಜಿಕ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳು ಪರೀಕ್ಷೆಗಳು ನಡೆಯಲಿವೆ. ಜು. 22 ರಂದು ಗುರುವಾರ ಎರಡನೇ ದಿನ ಇಂಗ್ಲಿಷ್, ಕನ್ನಡ, ಹಿಂದಿ ಮತ್ತು ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ.

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 188 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 38 ಸಾವಿರದ 101 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 18686 ಬಾಲಕರು ಮತ್ತು 15 ಸಾವಿರ ಬಾಲಕಿಯರು ಸೇರಿ 33686 ಹೊಸದಾಗಿ ಪರೀಕ್ಷೆ ಬರೆಯಲಿದ್ದಾರೆ. ಇವರ ಜೊತೆಯಲ್ಲಿಯೇ 3120 ಬಾಲಕರು ಹಾಗೂ 1295 ಬಾಲಕಿಯರು ಸೇರಿ ಒಟ್ಟು 4415 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಈ ಮಧ್ಯೆ, ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಅಂಥ ವಿದ್ಯಾರ್ಥಿಗಳು ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ಕೂಡ ವಿಜಯಪುರ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

153 ಸರಕಾರಿ, 18 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು, 208 ಖಾಸಗಿ ಅನುದಾನಿತ ಮತ್ತು 194 ಖಾಸಗಿ ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 573 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 188 ಕೇಂದ್ರ ಗಳಲ್ಲಿ ಪರೀಕ್ಷೆ ಕಾರ್ಯ ನಿರ್ವಹಿಸಲು ಒಟ್ಟು 4387 ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ಪರೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಿದೆ. ಇವರಲ್ಲಿ 198 ಮುಖ್ಯ ಹಾಗೂ ಉಪ ಮುಖ್ಯ ಅಧೀಕ್ಷಕರು, 3355 ಕೊಠಡಿ ಮೇಲ್ವಿಚಾರಕರು, 605 ಸಹಾಯಕ ಮತ್ತು ಇತರೆ ಸಿಬ್ಬಂದಿ 35 ತಾಲೂಕು ಕಚೇರಿ ಸಿಬ್ಬಂದಿ ಸೇರಿದ್ದಾರೆ.

ಈ ಮಧ್ಯೆ ಪರೀಕ್ಷೆ ನಡೆಯುವ ದಿನ ವಿಜಯಪುರ ನಗರ ಮತ್ತು ಜಿಲ್ಲೆಯ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿಜಯಪುರ ಉಪವಿಭಾಗಾಧಿಕಾರಿ ನಾರಾಯಣಪ್ಪ ಕುರುಬರ ಸರಕಾರದ ಆದೇಶದಂತೆ ಅವಕಾಶ ಕಲ್ಪಿಸಿದ್ದಾರೆ.

ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದೆ.

ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸುಸೂತ್ರವಾಗಿ ಮತ್ತು ಕ್ರಮಬದ್ದವಾಗಿ ನಡೆಸಲು ವಿಜಯಪುರ ಜಿಲ್ಲಾಡಳಿತ ಸನ್ನದವಾಗಿದೆ.

Leave a Reply

ಹೊಸ ಪೋಸ್ಟ್‌