ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬುದ್ದಿ ಭ್ರಮಣೆಯಾಗಿದೆ. ಹೀಗಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕಳೆದ ಐದಾರು ತಿಂಗಳುಗಳಿಂದ ಯತ್ನಾಳ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ತಪ್ಪಿದ್ದಕ್ಕಾಗಿ ಈಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಈ ಹಿಂದೆ ಕೂಡಲ ಸಂಗಮ ಸ್ವಾಮೀಜಿ ಇದೇ ವಿಚಾರವಾಗಿ ಹೋರಾಟ ಮಾಡಿದಾಗ ಯತ್ನಾಳ ಸ್ವಾಮೀಜಿಗಳ ವಿರುದ್ಧವೇ ಹರಿಹಾಯ್ದಿದ್ದರು. ಈಗ ತಮ್ಮ ಬೆನ್ನ ಹಿಂದೆ ಪಂಚಮಸಾಲಿ ಸಮಾಜವಿದೆ. ಹಿಂದೂ ಸಮಾಜವಿದೆ ಎಂದು ಬಿಂಬಿಸಿಕೊಳ್ಳಲು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಎಲ್ಲರ ವಿರುದ್ಧವೂ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೇ, ಈಗ ಯತ್ನಾಳ ಅವರ ನೇತೃತ್ವದ ಸಿದ್ಧಸಿರಿ ಸೌಹಾರ್ಧದಲ್ಲಿ ನೇಮಕಾತಿಗಾಗಿ ಹಣ ಪಡೆಯುತ್ತಿದ್ದಾರೆ. ಉಂಡ ತಟ್ಟೆಯಲ್ಲಿ ಹೇಸಿಗೆ ಮಾಡುವದು ಶಾಸಕ ಯತ್ನಾಳ ಚಟವಾಗಿದೆ. ಈಗ ಸಿಎಂ ರೇಸ್ ನಲ್ಲಿ ಮುರುಗೇಶ ನಿರಾಣಿ ಮತ್ತು ಅರವಿಂದ ಬೆಲ್ಲದ ಹೆಸರು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ ಈಗ ನಿರಾಣಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಅಟಲ ಬಿಹಾರಿ ವಾಜಪೇಯಿ ಅವರ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಆದರೆ, ವಾಜಪೇಯಿ ಅವರ ಕಾಲದಲ್ಲಿಯೇ ಇದೇ ಯತ್ನಾಳ ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದರು. ಈಗ ಅಟಲ ಬಿಹಾರಿ ವಾಜಪೇಯಿ ಅವರ ಮೂರ್ತಿ ಮಾಡಿದ್ದಾರೆ. ಆದರೆ, ವಾಜಪೇಯಿ ಅವರ 10 ಮೂರ್ತಿ ಮಾಡಿಸಿದರೂ ಯತ್ನಾಳ ಮಾಡಿರುವ ಪಾಪ ಹೋಗುವುದಿಲ್ಲ. ಯತ್ನಾಳ ಅವರನ್ನು ಯಾರೂ ತುಳಿಯುವ ಪ್ರಯತ್ನ ಮಾಡಿಲ್ಲ. ತಮ್ಮನ್ನು ತಾವೇ ಸಮಾಧಿ ಮಾಡಿಕೊಳ್ಳುತ್ತಿದ್ದಾರೆ ಎಂದು ಭೀಮಾಶಂಕರ ಹದನೂರ ಹೇಳಿದರು.
ಯತ್ನಾಳ ಅವರನ್ನು ಬಿಜೆಪಿಗೆ ವಾಪಸ್ ತೆಗೆದುಕೊಳ್ಳಬೇಡಿ ಎಂದು ಸಾಕಷ್ಟು ಜನ ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಅವರಿಗೆ ಹೇಳಿದ್ದರು. ಆದರೆ, ಯಡಿಯೂರಪ್ಪ ಅವರು ಈ ಮಾತನ್ನು ಕೇಳಲಿಲ್ಲ. ಈಗ ಯಡಿಯೂರಪ್ಪ ಅವರು ಯತ್ನಾಳ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅದರ ಫಲ ಎದುರಿಸುತ್ತಿದ್ದಾರೆ. ತಾವು ಗಾಜಿನ ಮನೆಯಲ್ಲಿ ಇದ್ದೀರಿ. ಮತ್ತೊಬ್ಬರ ಮನೆಯ ಮೇಲೆ ಕಲ್ಲು ಎಸೆಯುವ ಪ್ರಯತ್ನ ಮಾಡಬಾರದು ಎಂದು ಅವರು ಹೇಳಿದರು.
ಶಾಸಕ ಯತ್ನಾಳ ವಿಜಯಪುರ ನಗರದ ಅಭಿವೃದ್ಧಿ ಮಾಡುತ್ತಿಲ್ಲ. ಜನರು ಮಹಾನಗರ ಪಾಲಿಕೆಯ ತಮ್ಮ ವಾರ್ಡಿನ ಸದಸ್ಯರನ್ನು ಕೇಳಬೇಕು ಎಂದರೆ ಯಾರೂ ಈಗ ಅಧಿಕಾರದಲ್ಲಿ ಇಲ್ಲ. ನೀವೇನು ಅಭಿವೃದ್ಧಿ ಮಾಡಿದ್ದೀರಿ? ನಾವೇನು ಮಾಡಿದ್ದೇವೆ ಎಂದು ಬಹಿರಂಗವಾಗಿ ಚರ್ಚೆ ಮಾಡೋಣ, ಅದಕ್ಕೆ ಸಿದ್ದರಿದ್ದರೆ ಬನ್ನಿ ಎಂದು ಶಾಸಕ ಯತ್ನಾಳ ಅವರಿಗೆ ಭೀಮಾಶಂಕರ ಹದನೂರ ಸವಾಲು ಹಾಕಿದರು.
ಯತ್ನಾಳ ಅವರಿಗೆ ಉಂಡ ತಾಟಿನಲ್ಲಿ ಹೇಸಿಗೆ ಮಾಡುವುದು ಚಟವಾಗಿದೆ. ಅವರು ಉಪಕಾರ ಮಾಡಿದ ಯಾರನ್ನೂ ಸ್ಮರಿಸಲ್ಲ. ಕೆಲ ತಿಂಗಳ ಹಿಂದೆ ಪ್ರಲ್ಲಾದ ಜೋಷಿ, ಜಗದೀಶ ಶೆಟ್ಟರ ಸೇರಿದಂತೆ ಎಲ್ಲರನ್ನು ಟೀಕಿಸುತ್ತಿದ್ದರು. ಈಗ ಅವರ ಪರ ಮಾತನಾಡುತ್ತಾರೆ. ಹೀಗಾಗಿ ಇವರಿಗೆ ಸ್ಪಷ್ಟತೆ ಇಲ್ಲ ಎಂದು ಆರೋಪಿಸಿದ ಭೀಮಾಶಂಕರ ಹದನೂರ, ವಿಜಯಪುರ ನಗರ ಸಂಪೂರ್ಣ ಹದಗೆಟ್ಟಿದೆ. 2-3 ರಸ್ತೆ ಮಾಡಿದರೆ ಅಭಿವೃದ್ಧಿ ಅಲ್ಲ. ಇಡೀ ನಗರದ ರಸ್ತೆಗಳು ಹದಗೆಟ್ಟಿವೆ. ರಾಜ್ಯದಲ್ಲಿ ವಿಜಯಪುರ ನಗರದ ಹೆಸರು ಕೆಟ್ಟಿದೆ. ಅತೀ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಜನ ಮಾತನಾಡಿ ಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.