ಬಿ ಎಸ್ ವೈ ಬಿಟ್ಟು ಬೇರಾವ ಲಿಂಗಾಯಿತ ಶಾಸಕರು, ಸಚಿವರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯಿಲ್ಲ- ಯಡಿಯೂರಪ್ಪ ರಾಜೀನಾಮೆ ನೀಡಿದರೆ ಲಿಂಗಾಯಿತರು ಬಿಜೆಪಿಯಿಂದ ದೂರವಾಗುತ್ತಾರೆ- ಇಂಗಳೇಶ್ವರ ಸ್ವಾಮೀಜಿ ಎಚ್ಚರಿಕೆ

ವಿಜಯಪುರ: ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸುಲಾಗುತ್ತಿದೆ ಎಂಬ ವಿಚಾರ ಈಗ ರಾಜ್ಯಾದ್ಯಂತ ಜೋರಾಗಿ ಸದ್ದು ಮಾಡುತ್ತಿರುವ ಮಧ್ಯೆಯೇ ಲಿಂಗಾಯಿತ ಸ್ವಾಮೀಜಿಗಳು ಬಿ ಎಸ್ ವೈ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಚನಶಿಲಾ ಮಂಟಪ ವಿರಕ್ತ ಮಠಾಧೀಶ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರ ವಿರುದ್ಧ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ರಾಜಕಾರಣದ ಪ್ರಸಕ್ತ ವಿದ್ಯಮಾನಗಳು ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುವ ಲಕ್ಷಣಗಳನ್ನು ತೋರಿಸುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದರೆ ಲಿಂಗಾಯತ ಸಮುದಾಯದವರು ಬಿಜೆಪಿಯಿಂದ ದೂರಾಗುತ್ತಾರೆ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು 40-50 ವರ್ಷಗಳವರೆಗೆ ಅಲೆದಾಡಿ ಪಕ್ಷ ಸಂಘಟಿಸುವ ಜತೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ. ಈ ಹಿಂದೆ ವಿರೇಂದ್ರ ಪಾಟೀಲರು 185ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸಿ ಮುಖ್ಯಮಂತ್ರಿಯಾದ ನಂತರ ಸರಿಯಾಗಿ ನಡೆಸಿಕೊಳ್ಳದ ಕಾರಣದಿಂದ ಲಿಂಗಾಯತರು ಹಾಗೂ ಲಿಂಗಾಯತ ಬೆಂಬಲಿತ ಸಮಾಜದವರು ಕಾಂಗ್ರೆಸ್ ಪಕ್ಷದಿಂದ ದೂರಾದರು. ಹಿರಿಯ ಹಾಗೂ ಪ್ರಾಮಾಣಿಕ ವ್ಯಕ್ತಿಯಾದ ಎಸ್. ಆರ್. ಪಾಟೀಲರಿ ಅವರಿಗೆ ಕಾರಣವಿಲ್ಲದೆ ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಯಡಿಯೂರಪ್ಪನವರು ಲಿಂಗಾಯತ ಸರ್ವ ಸಮಾಜದ ಪ್ರಶ್ನಾತೀತ ಪ್ರಭಾವಿ ನಾಯಕರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಇಲ್ಲವೆ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಲು ಮುಂದಾಗಬಾರದು. ಒಂದು ವೇಳೆ ಮುಂದಾದರೆ ಲಿಂಗಾಯತರು ಬಿಜೆಪಿಯಿಂದ ದೂರ ಸರಿಯುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ಸಿನಲ್ಲಿ ಲಿಂಗಾಯಿತರಿಗೆ ಮುಖ್ಯಮಂತ್ರಿ ಸ್ಥಾನ ದೂರದ ಮಾತಾಗಿದೆ. ಮಂತ್ರಿ ಪದವಿಗೆ ತೃಪ್ತರಾಗಬೇಕಿದೆ. ಜೆಡಿಎಸ್‌ನಲ್ಲಿ ಮುಖ್ಯಮಂತ್ರಿ ಪದವಿ ಒಕ್ಕಲಿಗರಿಗೆ ಫಿಕ್ಸ್ ಆಗಿದೆ. ಯಡಿಯೂರಪ್ಪ ರಾಜ್ಯದಲ್ಲಿ 25 ಸಂಸದರನ್ನು ಗೆಲ್ಲಿಸುವ ಮೂಲಕ ಕೇಂದ್ರ ಸರಕಾರಕ್ಕೆ ಕೊಡುಗೆ ನೀಡಿದ್ದಾರೆ. ಕೇಂದ್ರದವರು ಇದನ್ನು ಅರಿತುಕೊಳ್ಳಬೇಕು. ಈ ಹಿಂದೆ ಬಿಎಸ್‌ವೈ ಮುಖ್ಯಮಂತ್ರಿ ಇದ್ದಾಗ ಸದಾನಂದಗೌಡರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಆಗ ವ್ಯತಿರಿಕ್ತವಾಗಿ ಹೇಳಿಕೆ ನೀಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದರು. ಪಕ್ಷಕ್ಕೆ ಹಾನಿಯಾಗದಂತೆ ನಿಗಾ ವಹಿಸುತ್ತಿದ್ದರು. ಆದರೆ, ಇಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಉಳಿದ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಮುಂದಿನ ಬಾರಿಯೂ ಯಡಿಯೂರಪ್ಪನವರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಮುಂದಿನ ಅವಧಿಯಲ್ಲಿ ಯಾರು ನೇತೃತ್ವ ತೆಗೆದುಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೋ ಅವರೇ ಮುಖ್ಯಮಂತ್ರಿ ಆಗಬಹುದು ಎಂದು ಶ್ರೀಗಳು ಹೇಳಿದರು.

ಬಿಜೆಪಿಯಲ್ಲಿರುವ ಲಿಂಗಾಯಿತ ಶಾಸಕರು ಮತ್ತು ಸಚಿವರಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಶಕ್ತಿಯಿಲ್ಲ. ಈಗ ತಾವೇ ಸಿಎಂ ಆಗಬೇಕು ಎಂದು ಹೊರಟಿರುವವರು ಮೊದಲು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಇದನ್ನು ಬಿಟ್ಟು ಸಿಎಂ ಆಗಲು ಹೊರಟರೇ ನೀವು ನಿಮ್ಮ ಲಿಂಗಾಯಿತ ಧರ್ಮಕ್ಕೆ ಮತ್ತು ಧರ್ಮಭೂಮಿಗೆ ಅನ್ಯಾಯ ಮಾಡಿದಂತಾಗುತ್ತದೆ. ಬಿಜೆಪಿಯಲ್ಲಿರುವ ಎಲ್ಲ ಶಾಸಕರು ಮತ್ತು ಸಚಿವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಆಗ್ರಹಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎನ್ನುವ ಕಾರಣ ಮುಂದೆ ಮಾಡಲಾಗುತ್ತಿದೆ. ಅವರಲ್ಲಿಯ ಸಕಾರಾತ್ಮಕ ಕಾರ್ಯಗಳನ್ನು ಲೆಕ್ಕಕ್ಕಿಲ್ಲ ಇಲ್ಲದಂತೆ ಮಾಡಲಾಗುತ್ತಿದೆ. ಇದರಿಂದ ಬಿಜೆಪಿ ಹಾಗೂ ರಾಜ್ಯಕ್ಕೆ ಲಾಭವಾಗುತ್ತದೆ. ಬಿ. ವೈ. ವಿಜಯೇಂದ್ರ ಮತ್ತು ಬಿ. ವೈ. ರಾಘವೇಂದ್ರ ಕೂಡ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಬಿಜೆಪಿಯ ಎಲ್ಲ ನಾಯಕರೂ ಒಂದು ಕುಟುಂಬದಂತೆ ಯೋಚಿಸಿ ಮುಂದಾಗಬೇಕು. ಚುನಾವಣೆಯಲ್ಲಿ ಕೇಂದ್ರದ ಪ್ರಭಾವ ಕೇವಲ ಶೇ. 20 ರಷ್ಟಿರುತ್ತದೆ. ಆದರೆ, ಯಡಿಯೂರಪ್ಪನವರಿಗೆ ಎಲ್ಲರನ್ನು ಒಗ್ಗೂಡಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯವಿದೆ. ಕೆಲವರು ತಾವೇ ಪ್ರಭಾವಿ ಎಂದು ಕೊಂಡಿದ್ದಾರೆ. ಆದರೆ, ಸ್ವಂತ ಶಕ್ತಿ ಮೇಲೆ ಗೆದ್ದು ಬರುವ ಸಾಮರ್ಥ್ಯವಿಲ್ಲದಿರುವುದು ವಾಸ್ತವಿಕ ಸಂಗತಿಯಾಗಿದೆ ಎಂದು ಶ್ರೀಗಳು ಒತ್ತಾಯಿಸಿದರು.ಹೇಳಿದರು.

ಸಿಎಂ ಯಡಿಯೂರಪ್ಪ ಅವರಿಗೆ ಮುಂಬೈ, ಕಲ್ಯಾಣ ಹಾಗೂ ಉತ್ತರ ಕರ್ನಾಟಕ, ಮೈಸೂರು ಭಾಗದ ಜನತೆ ಬೆಂಬಲ ನೀಡಿದ್ದಾರೆ. ಯಡಿಯೂರಪ್ಪ ಅವರು ಲಿಂಗಾಯಿತ ಸಮುದಾಯಕ್ಕೆ ಹೇಳದೆ ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿಯಬಾರದು. ಅಲ್ಲದೆ, ಎಲ್ಲ ಸಮುದಾಯದ ಜನತೆಯೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ನಗುನಗುತ್ತಾ ಮಾತನಾಡಿ ಸ್ಪಂದಿಸಬೇಕು. ಲಿಂಗಾಯಿತ ಸಮುದಾಯದ ಭವಿಷ್ಯಕ್ಕಾಗಿ ಉಳಿದ ನಾಯಕರು ಯಡಿಯೂರಪ್ಪ ಅವರಿಗೆ ಸಹಕರಿಸಬೇಕು. ಯಡಿಯೂರಪ್ಪ ಇಲ್ಲದ ಬಿಜೆಪಿ ಸಂಘಟನೆ ಕಷ್ಟಕರವಾಗಿದೆ. ಬಿಜೆಪಿ ನಾಯಕರು ಅವರಿಗೆ ಸಹಕಾರ ನೀಡಿ ನಾಡಿನ ಒಳತಿಗೆ ಸ್ಪಂದಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಸ್ವಾಮೀಜಿಗಳು ದಕ್ಷಿಣೆಗಾಗಿ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದು ಸರಿಯಲ್ಲ. ಬಹುತೇಕ ಮಠಾಧೀಶರು ನೈಯ್ಯಾ ಪೈಸೇ ಅನುದಾನ ತೆಗೆದುಕೊಳ್ಳದೆ ಲಿಂಗಾಯಿತ ಸೇರಿ ಸರ್ವ ಸಮಾಜಕ್ಕೆ ಹಾಗೂ ನಾಡಿನ ಶ್ರೇಯೋಭಿವೃದ್ಧಿಗೆ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದುವರೆಯಬೇಕೆನ್ನುತ್ತಿರುವದನ್ನು ಅರಿತುಕೊಳ್ಳಬೇಕು ಎಂದು ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

Leave a Reply

ಹೊಸ ಪೋಸ್ಟ್‌