ವಿಜಯಪುರ: ವಿಜಯಪುರದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ವೀರಶೈವ ಲಿಂಗಾಯಿತ ಮಠಗಳ 20 ಜನ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬಿ. ಎಸ್. ಯಡಿಯೂರಪ್ಪ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ಯಡಿಯೂರಪ್ಪ ಅವರನ್ನು ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಒಂದು ವೇಳೆ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದವರಿಗೆ ಆ ಸ್ಥಾನ ನೀಡಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ.
ಬುರಣಾಪುರ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ ಮಾತನಾಡಿ, ಯಡಿಯೂರಪ್ಪ ಧೀಮಂತ ನಾಯಕ. ಅವರ ಬದಲಾವಣೆ ವಿಚಾರ ಅಚ್ಚರಿ ಮೂಡಿಸಿದೆ. ರಾಜರ ಕಾಲದಿಂದಲೂ ರಾಜಗುರು ಪದ್ಧತಿಯಿದೆ. ರಾಜಕಾರಣಿಗಳು, ಮಠಾಧೀಶರಿಗೆ ಅನಾದಿ ಕಾಲದಿಂದಲೂ ಸಂಬಂಧವಿದೆ ಇದು ಹೊಸದಲ್ಲ. ಬಿ ಎಸ್ ವೈ ನಾಯಕತ್ವ ಮುಂದುವರೆಯಲಿ ಎಂಬುದು ಎಲ್ಲ ಮಠಾಧೀಶರಷ್ಟೇ ಅಲ್ಲ ಜನಸಾಮಾನ್ಯರ ಬೆಂಬಲವೂ ಇದೆ. ಪ್ರತಿಯೊಬ್ಬ ಮಠಾಧೀಶರ ಹಿಂದೆ ಕನಿಷ್ಠ ಐದು ಸಾವಿರ ಜನ ಭಕ್ತರಿದ್ದಾರೆ ಎಂದು ತಿಳಿಸಿದ್ದಾರೆ.
ಬಬಲೇಶ್ವರ ಬೃಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿ, ಉತ್ತರ ಕರ್ನಾಟಕದ ವೀರಶೈವ ಲಿಂಗಾಯಿತ ಮಠಾಧೀಶರು ಯಡಿಯೂರಪ್ಪ ಬೆಂಬಲಕ್ಕಿದ್ದಾರೆ. ಅವಧಿಗೂ ಮುಂಚೆ ಸಿಎಂ ಬದಲಾವಣೆ ಬೇಡ. ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿ. ಜಂಗಮ ಪ್ರೇಮಿ. ಸಾಧುಗಳ ಪ್ರೇಮಿ. ಸರ್ವ ಜನಾಂಗದ ಪ್ರೇಮಿಯಾಗಿದ್ದಾರೆ. ಬಿಜೆಪಿ ಹೈಕಮಾಂಡ ಸ್ವಾಮೀಜಿಗಳ ಕರೆಗೆ ಓಗೂಡಬೇಕು ಎಂದು ಹೇಳಿದರು.
ಶಿರೋಳ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ ಮಾತನಾಡಿ, ಮಠಾಧೀಶರು ಯಡಿಯೂರಪ್ಪ ಅವರಿಗೆ ನೈತಿಕ ಬೆಂಬಲ ನೀಡುತ್ತೇವೆ. ಹುಟ್ಟು ಹೋರಾಟಗಾರ, ಜನನಾಯಕ ಸಿಎಂ ಆಗಿ ಮುಂದುವರೆಯಬೇಕು. ಹೈಕಮಾಂಡ ಸಿಎಂ ಬದಲಾಯಿಸಿದರೆ ಉತ್ತರ ಕರ್ನಾಟಕದವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಂಡಿಯ ಡಾ. ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಕೊರೊನಾ, ಪ್ರವಾಹದಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ, ಕೇಂದ್ರಗಳಲ್ಲಿ ಸುಭದ್ರ ಸರಕಾರ ಇರಬೇಕು. ಬಸವಣ್ಣನವರ ತತ್ವದಡಿ ಸಿಎಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಎರಡು ವರ್ಷ ಸಿಎಂ ಆಗಿ ಮುಂದುವರೆಯಬೇಕು. ಸಿಎಂ ಬದಲಾವಣೆ ಬೇಡ. ಕೇಂದ್ರ ಸರಕಾರ, ಸಂಸದರು, ಶಾಸಕರು ಸಿಎಂ ಬದಲಾವಣೆ ಮಾಡಬಾರದು. ಸಿಎಂ ದೇಶ, ರಾಜ್ಯ, ಪಕ್ಷಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಎರಡು ವರ್ಷದ ನಂತರ ಗೌರವಯುತವಾಗಿ ಬೀಳ್ಕೋಡಬೇಕು ಎಂದು ಆಗ್ರಹಿಸಿದ್ದಾರೆ.
ಆಲಮೇಲದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ಅವರ ಸೇವೆ ಇನ್ನೂ ಅಗತ್ಯವಾಗಿದೆ. ಸಿಎಂ ಬದಲಾವಣೆ ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನ. ಬಿಜೆಪಿ ಹೈಕಮಾಂಡ ಸಿಎಂ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮನಗೂಳಿ ಹಿರೇಮಠದ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಣದ ಕೈಗಳಿಂದ ಸಿಎಂ ಬದಲಾವಣೆ ಯತ್ನ ನಡೆದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿರುವ ಲಿಂಗಾಯಿತ ಶಾಸಕರು ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯಿತ ಶಾಸಕ ಮತ್ತು ಸಚಿವರು ನೌನ ವಹಿಸದೇ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲಬೇಕು. ಸ್ವಾಮೀಜಿಗಳೇ ಯಡಿಯೂರಪ್ಪ ಪರ ನಿಂತಿದ್ದಾರೆ. ಬಿಜೆಪಿ ಶಾಸಕರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಶಿದ್ದಾರೆ.
ಸ್ವಾಮೀಜಿಗಳು ಸಮಾವೇಶ ನಡೆಸಬೇಕಾದ ಪ್ರಸಂಗ ಎದುರಾದರೆ ಉತ್ತರ ಕರ್ನಾಟಕದ 500ಕ್ಕೂ ಹೆಚ್ಚು ಸ್ವಾಮೀಜಿಗಳು ಬೆಂಗಳೂರು ಮತ್ತು ದೆಹಲಿಗೆ ತೆರಳಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ ಶಾ, ನಿತೀನ ಗಡ್ಕರಿ ಅವರಿಗೆ ಸ್ವಾಮೀಜಿಗಳ ಮೇಲೆ ಭಕ್ತಿಯಿದೆ. ಯಡಿಯೂರಪ್ಪ ಅವರಿಗೆ ಕೇವಲ ಲಿಂಗಾಯಿತ ಸ್ವಾಮೀಜಿಗಳಷ್ಟೇ ಅಲ್ಲ ಬೇರೆ ಸಮುದಾಯಗಳ ಸ್ವಾಮೀಜಿಗಳ ಬೆಂಬಲವೂ ಇದೇ ಎಂದು ಸ್ಪಷ್ಟಪಡಿಸಿದ್ದಾರೆ.
ಯತ್ನಾಳ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಬಗ್ಗೆ ಮಠಾಧೀಶರಾರು ಮಾತನಾಡಿಲ್ಲ. ನೀವು ಮಠಾಧೀಶರ ಬಗ್ಗೆ ಮಾತನಾಡಬಾರದು. ಧರ್ಮಪಾಲನೆ ಮಾಡುವುದರ ಜೊತೆ ಉತ್ತಮ ಸಿಎಂ ಮುಂದುವರೆಯಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಕನೂರು ಕಮರಿಮಠದ ಶ್ರೀ ಸಿದ್ದಲಿಂಗ ದೇವರು, ಆಲಗೂರು ಲಕ್ಷ್ನಣ ಮುತ್ಯಾ, ರೂಗಿಯ ಅಡವಿ ಮಠಾಧೀಶ ಶ್ರೀ ನಿತ್ಯಾನಂದ ಮಹಾ ಸ್ವಾಮೀಜಿ, ಮೆಟಗುಡ್ಡ ವಿರಾನಂದಾಶ್ರಮದ ಶ್ರೀ ಚನ್ನಮಲ್ಲಯ್ಯ ಸ್ವಾಮೀಜಿ, ಗುಂಡಕನಾಳ ಬ್ರಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ತಡವಲಗಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಥರ್ಗಾದ ಶ್ರೀ ಮುರುಗೇಂದ್ರ ಸ್ವಾಮೀಜಿ, ತಿಕೋಟಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕುಮಸಗಿ ಭ್ರಹ್ಮಲಿಂಗೇಶ್ಬರ ಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಮಲಘಾಣ ಜಡೆ ಶಾಂತಲಿಂಗೇಶ್ವರ ಮಠಾಧೀಶರು, ಇಂಚಗೇರಿ ಮಠದ ರುದ್ರಮುನಿ ಸ್ವಾಮೀಜಿ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ರವಿ ಮುಕರ್ತಿಹಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.