ಗುರುಗಳಿಗೆ ಕೃತಜ್ಞತೆ ಅರ್ಪಿಸುವ ದಿನವೇ ಗುರು ಪೂರ್ಣಿಮೆ

ನೀಲಕಂಠ ಬಡಚಿ

ವಿಜಯಪುರ: ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರಾದಾಯಿಕವಾಗಿ ಗುರುಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನ ಗುರುವಿನ ಅನುಗ್ರಹ, ಉಪದೇಶ ಪಡೆದರೆ ಮನುಷ್ಯನಲ್ಲಿರುವ ಸಂದೇಹಗಳು ಬಗೆ ಹರಿದು ಉತ್ತಮವಾದ ಸಾತ್ವಿಕ ಜೀವನ ನಡೆಸಲು ಸಾಧ್ಯ ಎಂಬುದು ಬಲವಾದ ನಂಬಿಕೆಯಾಗಿದೆ.

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತರನ್ನು ಹೊರತರುವ ಮತ್ತು ಅವರಿಂದ ಅವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಹಾಗೂ ಅತ್ಯಂತ ಕಠಿಣ ಸಮಯದಲ್ಲಿ ಅವನಿಗೆ ನಿರಪೇಕ್ಷ ಪ್ರೇಮಗಳಿಂದ ಆಧಾರ ನೀಡಿ ಸಂಕಟಗಳಿಂದ ಮುಕ್ತ ಮಾಡುವವರೇ ಗುರುಗಳು. ಗುರು ಎಂದರೆ ಈಶ್ವರನ ಸಗುಣ ರೂಪ, ವರ್ಷಪೂರ್ತಿ ಗುರುಗಳು ಶಿಷ್ಯರಿಗೆ, ಭಕ್ತರಿಗೆ ಅಧ್ಯಾತ್ಮದ ಭೋಧಾಮೃತವನ್ನು ನೀಡುತ್ತಿರುತ್ತಾರೆ. ಇಂಥ ಗುರಗಳ ಚರಣಗಳಲ್ಲಿ ಕೃತಜ್ಞತೆ ಅರ್ಪಿಸುವುದೇ ಗುರು ಪೂರ್ಣಿಮೆ ಆಚರಣೆಯ ಹಿಂದಿನ ಉದ್ದೇಶವಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಸಮಸ್ತ ಜೀವರಾಶಿಗಳನ್ನು ನಿಯಂತ್ರಿಸುವ ದೇವಾನುದೇವತೆಗಳಿಗೂ ಕೂಡ ಗುರುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿಯೇ ಹಿಂದೂ ಧರ್ಮದಲ್ಲಿ ಗುರುವಿಗೆ ಶ್ರೇಷ್ಠ ಮತ್ತು ವಿಶೇಷ ಸ್ಥಾನ ನೀಡಲಾಗಿದೆ. ಹರ ಮುನಿದರೂ ಗುರು ಕಾಯುವ, ಗುರು ಮುನಿದರೆ ಯಾರು ಕಾಯುವರಿಲ್ಲ ಎಂಬ ವಾಕ್ಯದಂತೆ ಒಂದು ವೇಳೆ ಈಶ್ವರ ನಮ್ಮ ಸಹಾಯಕ್ಕೆ ಬಾರದಿದ್ದರೆ ಗುರುಗಳು ನಮ್ಮ ಸಹಾಯಕ್ಕೆ ಬರುತ್ತಾರೆ, ಗುರುಗಳೇ ನಮ್ಮ ಸಹಾಯಕ್ಕೆ ಬಾರದಿದ್ದರೆ ಯಾರು ನಮ್ಮನ್ನು ಕಾಯಿವವರಿಲ್ಲ ಎಂದು ಗುರುವಿನ ಮಹತ್ವವನ್ನು ವರ್ಣಿಸಿದ್ದಾರೆ. ಗುರು ಎಂಬ ಶಕ್ತಿಗೆ ದೇವತೆಗಳು ಶರಣಾಗಿ ಪರಿಹಾರಗಳನ್ನೂ ಕಂಡುಕೊಂಡಿದ್ದಾರೆ. ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ.

ಗುರು ಎನ್ನುವ ಶಬ್ಧ ಗು ಮತ್ತು ರು ಎಂಬ ಎರಡು ಅಕ್ಷರಗಳನ್ನು ಒಳಗೊಂಡಿದೆ. ಸಂಸ್ಕೃತದಲ್ಲಿ ಗು ಎಂದರೆ ಅಜ್ಞಾನ ಅಥವಾ ಅಂಧಕಾರ ರು ಎಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅಂದರೆ ಗುರುಗಳು ಶಿಷ್ಯನ ಜೀವನದಲ್ಲಿನ ಅಂಧಕಾರ ಅಥವಾ ಅಜ್ಞಾನವನ್ನು ಹೋಗಲಾಡಿಸಿ ಶಿಷ್ಯನಿಗೆ ಜ್ಞಾನವನ್ನು ನೀಡಿ ಅವನ ಉದ್ಧಾರ ಮಾಡುತ್ತಾರೆ. ಗುರುವಿನ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆತು ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವೆಂದು ಹೇಳಲಾಗಿದೆ. ಗುರುವಿಗೆ ಗೌರವ ನೀಡಿ ಬದುಕುವವನು ಜೀವನದಲ್ಲಿ ಅನೇಕ ಅದ್ವಿತೀಯ ಕಾರ್ಯಗಳನ್ನು ಮಾಡುತ್ತಾನೆ ಮತ್ತು ನೆಮ್ಮದಿಯ ಜೀವನವನ್ನು ಕಾಣುತ್ತಾನೆ.

ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮ ದಿನವೆಂದು ಗುರುಪೂರ್ಣಿಮೆಯನ್ನು ಆಚರಿಸಲಾಗಿತ್ತದೆ. ಮಹರ್ಷಿ ವ್ಯಾಸರು ತಮ್ಮ ಪ್ರಸಿದ್ಧ ಕೃತಿ ಬ್ರಹ್ಮ ಸೂತ್ರವನ್ನು ಇದೇ ದಿನ ಮುಗಿಸಿದರು ಎಂದೂ ಐತಿಹ್ಯವಿದೆ. ಇದರ ಸ್ಮರಣಾರ್ಥ ಈ ದಿನ ಬ್ರಹ್ಮ ಸೂತ್ರಗಳ ಪಠಣ ಮಾಡಲಾಗುತ್ತದೆ ಮತ್ತು ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ.

ಗುರು ಪೂರ್ಣಿಮೆ ಗುರುತತ್ತ್ವದ ಲಾಭ ಪಡೆಯುವ ಒಂದು ಉತ್ತಮ ಪರ್ವವಾಗಿದೆ. ಅಲ್ಲದೇ, ಗುರು ಪೂರ್ಣಿಮೆಯಂದು ಗುರು ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ತಿಳಿಸುವ ದಿನವಾಗಿದೆ. ಈ ದಿನ ಗುರುಗಳ ಪಾದುಕೆಗಳ ಮತ್ತು ಭಾವಚಿತ್ರದ ಪೂಜೆಯನ್ನು ಮಾಡಿ ಗುರುದಕ್ಷಿಣೆಯನ್ನು ಅರ್ಪಿಸುತ್ತಾರೆ. ಗುರು ಪೂರ್ಣಿಮೆಯಂದು ಶ್ರದ್ಧೆ, ಭಕ್ತಿಯಿಂದ ಗುರುಗಳಿಗೆ ನಮ್ಮ ಶಕ್ತ್ಯಾನುಸಾರ ಗುರುದಕ್ಷಿಣೆಯನ್ನು ಸಮರ್ಪಿಸಿ ಈ ಗುರು ಪೂರ್ಣಿಮೆಯಂದು ಗುರುಗಳ ಕೃಪೆಗೆ ಪಾತ್ರರಾಗೋಣ.

Leave a Reply

ಹೊಸ ಪೋಸ್ಟ್‌