ವಿಜಯಪುರ: ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆಯ ಇಂಡಿ ಡಿಪೋದ ಬಸ್ಸಿನಲ್ಲಿದ್ದ 19 ಜನರನ್ನು ಎನ್ ಡಿ ಆರ್ ಎಫ್ ತಂಡ ರಕ್ಷಣೆ ಮಾಡಿದೆ.
ವಿಜಯಪುರ ಜಿಲ್ಲೆಯ ಇಂಡಿಯಿಂದ ಮಹಾರಾಷ್ಟ್ರದ ರತ್ನಾಗಿರಿಗೆ KA-28/
F-2230 ನಂಬರಿನ ಬಸ್ ನಿನ್ನೆ ತೆರಳಿತ್ತು. ಆದರೆ, ಕೊಲ್ಹಾಪುರದಿಂದ ರತ್ನಾಗಿರಿಗೆ ಹೋಗುವ ಮಾರ್ಗದಲ್ಲಿ 2 ಕಿ. ಮೀ. ಸಂಚರಿಸಿದಾಗ ದೊಡ್ಡ ಹಳ್ಳದ ನೀರಿನಲ್ಲಿ ಕೃಷ್ಣಾ ನದಿಯ ಪ್ರವಾಹ ಏಕಾಏಕಿ ಏರಿಕೆಯಾಗಿ ಬಸ್ಸು ನಡು ನೀರಿನಲ್ಲಿ ನಿಂತು ಬಿಟ್ಟಿದೆ. ಅರ್ಧ ಬಸ್ಸು ನೀರಿನಲ್ಲಿ ಮುಳುಗಿ ಹೋಗಿದೆ.
ಈ ಬಸ್ಸನ್ನು ಚಾಲಕ ಶ್ರೀಶೈಲ ಬೋಳೆಗಾಂವ ಚಲಾಯಿಸುತ್ತಿದ್ದರು. ಈ ಬಸ್ಸಿನಲ್ಲಿ ಅಬ್ಬಾಸಲಿ ನಿರ್ವಾಹಕರಾಗಿದ್ದರು. ಇವರಿಬ್ಬರೂ ಸೇರಿದಂತೆ ಒಟ್ಟು 19 ಜನ ಪ್ರಯಾಣಿಕರು ಬಸ್ಸಿನಲ್ಲಿದ್ದರು. ಏಕಾಏಕಿ ನಡೆದ ಈ ಘಟನೆಯಿಂದಾಗಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ದಿಕ್ಕು ತೋಚದಂತಾಗಿ ಕಂಗಾಲಾಗಿದ್ದಾರೆ. ಆಗ, ಈ ವಿಷಯ ತಿಳಿದ ಎನ್ ಡಿ ಆರ್ ಎಫ್ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿದೆ. ಅಲ್ಲದೇ, ಬಸ್ಸಿನಲ್ಲಿದ್ದ ಎಲ್ಲ 19 ಜನರನ್ನು ಡೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ತಂದು ಬಿಟ್ಟಿದೆ.
ಈ ವಿಷಯ ತಿಳಿದ ವಿಜಯಪುರ ಕೆ ಕೆ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಇಡೀ ರಾತ್ರಿ ಜಾಗರಣೆ ನಡೆಸಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಯಾಣಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ನೆರವಾಗಿದ್ದಾರೆ.
ಈಗಲೂ ಬಸ್ಸು ಹಳ್ಳದ ನೀರಿನಲ್ಲಿ ನಿಂತಿದೆ ಎಂದು ಮೂಲಕಳು ಬಸವ ನಾಡಿಗೆ ತಿಳಿಸಿವೆ.
ಈಗಲೂ ಬಸ್ಸು ಹಳ್ಳದ ನೀರಿನಲ್ಲಿ ನಿಂತಿದೆ ಎಂದು ಮೂಲಗಳು ಬಸವ ನಾಡಿಗೆ ತಿಳಿಸಿವೆ.