ಬಸವ ನಾಡಿನಲ್ಲೊಂದು ವಿನೂತನ ಪ್ರಯತ್ನ- ಸ್ವಚ್ಛಂದ ಪರಿಸರದಲ್ಲಿ ಚೆಂಬೆಳಕಿನಲ್ಲಿ ರಾತ್ರಿ ಕಳೆಯಲಿರುವ ಪರಿಸರ ಪ್ರೇಮಿಗಳು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕ ಮತ್ತು ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುವ ವಿನೂತನ ಪ್ರಯತ್ನಗಳು ನಡೆಯುತ್ತಲೇ ಇವೆ. ಅದರಲ್ಲೂ ಗುರು ಪೂರ್ಣಿಮೆಯಂದು ಪರಿಸರದ ಕಾಳಜಿಯ ಜೊತೆಗೆ ಮಾನವ ನಿರ್ಮಿತ ಕಾಡಿನ ಪರಿಸರದಲ್ಲಿ ರಾತ್ರಿಯಿಡೀ ಕಳೆಯುವ ಮೂಲಕ ಹೊಸದೊಂದು ಪ್ರಯೋಗಕ್ಕೆ ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಜೀವ ವೈವಿದ್ಯತೆ, ಪರಿಸರ ವ್ಯವಸ್ಥೆ ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಡಾ. ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ಯುವಕರ ತಂಡ ತಮ್ಮಂಥ ತರುಣರನ್ನು ಪರಿಸರದತ್ತ ಹೆಚ್ಚೆಚ್ಚು ಆಕರ್ಷಿಸಲು ಈ ವಿನೂತನ ಪ್ರಯತ್ನ ನಡೆಸಲಿದ್ದಾರೆ.

ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯ ಹಿಂಭಾಗ ಟೆಂಟ್ ಸಿದ್ಧಪಡಿಸುತ್ತಿರುವ ಪರಿಸರ ಪ್ರೇಮಿಗಳು

ಗುರು ಪೂರ್ಣಿಮೆ ಚಂದ್ರನ ಬೆಳಕಿನಲ್ಲಿ ಪರಿಸರದಲ್ಲಿಯೇ ವಾಸ್ತವ್ಯ ಕಾರ್ಯಕ್ರಮವನ್ನು ವಿಜಯಪುರದ ಭೂತನಾಳ ಕೆರೆ ಕರಾಡದೊಡ್ಡಿ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ಆಯೋಜಿಸಲಾಗಿದೆ. ಶನಿವಾರ ಸಂಜೆಯಿಂದ ರವಿವಾರ ಬೆಳಗಿನ 11 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಕೃಷಿ ಮತ್ತು ಅರಣ್ಯ ವಿಜ್ಞಾನಿ ಡಾ. ಚಂದ್ರಶೇಖರ ಬಿರಾದಾರ ತಿಳಿಸಿದ್ದಾರೆ.

ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯ ಹಿಂಭಾಗದಲ್ಲಿ ಪರಿಸರ ಪ್ರೇಮಿಗಳು ಸಿದ್ಧಪಡಿಸಿರುವ ಟೆಂಟ್ ಗಳು

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನಿಸರ್ಗದೊಂದಿಗೆ ಸಮಯ ಕಳೆಯುವ ಕ್ಯಾಂಪಿಂಗ್ ಸಂಸ್ಕತಿ ಇದೆ. ಆದರೆ, ಭಾರತದಲ್ಲಿ ಈ ಸಂಸ್ಕೃತಿ ಕಡಿಮೆ ಇದೆ. ಪರಿಸರ ರಕ್ಷಣೆಗೆ ಮುಂದಾಗಬೇಕಿರುವ ಯುವಕರು ಟೆಂಟ್ ಗಳನ್ನು ಹಾಕಿ, ಆ ಪ್ರಕೃತಿಯಲ್ಲಿ ಒಂದು ದಿನ ಕಳೆದರೆ ಸ್ವಾಭಾವಿಕವಾಗಿ ಅವರಲ್ಲಿ ಆ ಪರಿಸರದ ಕುರಿತು ಆಸಕ್ತಿ, ಪ್ರೀತಿ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ವಿಜಯಪುರದಲ್ಲಿ ಕೋಟಿವೃಕ್ಷ ಅಭಿಯಾನ ಸಹಯೋಗದಲ್ಲಿ ಈ ಪರಿಸರ ವಾಸ್ತವ್ಯವನ್ನು ಆಯೋಜಿಸಲಾಗಿದೆ ಎಂದು ವೈದ್ಯ ಮತ್ತು ಪರಿಸರ ಪ್ರೇಮಿ ಡಾ. ಶಂಕರಗೌಡ ಬಿರಾದಾರ ತಿಳಿಸಿದ್ದಾರೆ.

ಈಗಾಗಲೇ ಭೂತನಾಳ ಕೆರೆಯ ಹಿಂಬದಿಯಲ್ಲಿ ಟೆಂಟ್ ಗಳನ್ನು ಸಿದ್ಧಪಡಿಸಿರುವ ಈ ಯುವಕರು ರಾತ್ರಿಯಿಡೀ ಇಲ್ಲೇಯೆ ಕಳೆಯುವ ಮೂಲಕ ಹೊಸ ಪರಿಸರ ಸಂರಕ್ಷಣೆಯ ಹೊಸ ಪರಿಪಾಠಕ್ಕೆ ಮುಂದಾಗಿದ್ದಾರೆ.

Leave a Reply

ಹೊಸ ಪೋಸ್ಟ್‌