ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ ಭೇಟಿ- ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೀಡಾದ ಆಸ್ತಿಪಾಸ್ತಿ ಕುರಿತು ಮಾಹಿತಿ ನೀಡಿದ ಡಿಸಿಎಂ ಗೋವಿಂದ ಕಾರಜೋಳ

ಬೆಳಗಾವಿ: ಕಳೆದ ಒಂದು‌ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿರಣ್ಯಕೇಶಿ ನದಿಯಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ಅಹವಾಲು ಆಲಿಸಿದರು. ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಲೆಯಿಂದಾಗಿ ಹಿರಣ್ಯಕೇಶಿ, ಕೃಷ್ಣಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳಲ್ಲಿ ಹಾಗೂ ಬೆಳಗಾವಿ ಸಮೀಪದ ಬಳ್ಳಾರಿ ನಾಲಾಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿ ಅಕ್ಕಪಕ್ಕದ ಕೆಲ ಗ್ರಾಮಗಳು ಜಲಾವೃತಗೊಂಡಿವೆ. ಹಿರಣ್ಯಕೇಶಿ ನದಿ ತೀರದಲ್ಲಿರುವ ಸಂಕೇಶ್ವರ ಪಟ್ಟಣದ ಮಠಗಲ್ಲಿ, ಕುಂಬಾರ ಓಣಿ ಹಾಗೂ ನದಿಗಲ್ಲಿಯ ಬಳಿಯ ಮುಳುಗಡೆ ಪ್ರದೇಶಗಳನ್ನು ಮುಖ್ಯಮಂತ್ರಿ ವೀಕ್ಷಿಸಿದರು.

ಬೆಳಗಾವಿಯಲ್ಲಿ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರೊಂದಿಗೆ ಮಾತನಾಡಿದ ಸಿಎಂ ಬಿ. ಎಸ್. ಯಡಿಯೂರಪ್ಪ

ಇದಾದ ಬಳಿಕ ಶಂಕರಲಿಂಗ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರ ಜೊತೆ ಮಾತನಾಡಿ, ಸಂಕೇಶ್ವರ ಪಟ್ಟಣದಲ್ಲಿ ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಮನೆಗಳ ಶಾಶ್ವತ ಸ್ಥಳಾಂತರಕ್ಕೆ ಐವತ್ತು ಎಕರೆ ಭೂಮಿ‌ ಲಭ್ಯವಿದೆ. ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮಳೆಯಿಂದ ಹಾನಿಗೀಡಾಗಿರುವ ಆಸ್ತಿಪಾಸ್ತಿ ಕುರಿತು ಸಮೀಕ್ಷೆ ಬಳಿಕ ಪರಿಹಾರ ನೀಡುವುದಾಗಿ ತಿಳಿಸಿದ ಅವರು, ಸಮೀಕ್ಷೆ ಪೂರ್ಣಗೊಂಡ ನಂತರ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಊಟೋಪಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ. ಸರಕಾರ ನಿಮ್ಮ ಜೊತೆಗಿದೆ ಎಂದು ಯಡಿಯೂರಪ್ಪ ಇದೇ ವೇಳೆ ಭರವಸೆ ನೀಡಿದರು.

ಬೆಳಗಾವಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಬಳಿಕ ಸಭೆ ನಡೆಸಿದ ಸಿಎಂ ಬಿ. ಎಸ್. ಯಡಿಯೂರಪ್ಪ

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಪ್ರವಾಹ ಸಂತ್ರಸ್ತರಿಗೆ ಎನ್ ಡಿ ಆರ್ ಎಫ್ ನಡಿ ಪರಿಹಾರ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇದಾದ ಬಳಿಕ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಅತಿವೃಷ್ಟಿಯಿಂದ ಮುಳುಗಡೆಯಾಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ನ್ನು ಸಿಎಂ ಪರಿಶೀಲನೆ ನಡೆಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಮಾತನಾಡಿ, 630 ಕುಟುಂಬಗಳಿಗೆ ಪ್ರವಾಹದಿಂದ ತೊಂದರೆಯಾಗಿದೆ. ಐದು ಕಾಳಜಿ ಕೇಂದ್ರಗಳಲ್ಲಿ ಅವರಿಗೆ ಆಶ್ರಯ ನೀಡಲಾಗಿದ್ದು, ಊಟೋಪಹಾರ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ಸೇತುವೆ, ರಸ್ತೆ ಮತ್ತು ಆಸ್ತಿಪಾಸ್ತಿ ಹಾನಿಯ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಹುಕ್ಕೇರಿ ಶಾಸಕ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌