ಪ್ರಕೃತಿಯ ಮಡಿಲಿನಲ್ಲಿ ವಿಹರಿಸಿ ಸಸಿಗೆ ನೀರುಣಿಸಿ ಸಂತಸಪಟ್ಟ ನಡೆದಾಡುವ ದೇವರು- ಆಧುನಿಕ ಭಗೀರಥನ ಪರಿಸರ ಪ್ರೀತಿಗೆ ಶ್ಲಾಘನೆ

ವಿಜಯಪುರ: ಅವರು ನಡೆದಾಡುವ ದೇವರು. ಅವರ ಮಾತುಗಳು ಈ ಭಾಗದಲ್ಲಿ ವೇದವಾಕ್ಯ. ಅವರು ಎದುರಿಗೆ ಕಂಡರೆ ಸಾಕು ಭಕ್ತರು ದೂರದಿಂದಲೇ ನಮಸ್ಕರಿಸುವ ಮೂಲಕ ಭಕ್ತಿಭಾವ ತೋರಿಸುತ್ತಾರೆ. ಈ ನಡೆದಾಡುವ ದೇವರು ಇಂದು ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ವಿಹರಿಸಿದರು. ಅಲ್ಲಿ ಅಭಿವೃದ್ಧಿ ಹೊಂದುತ್ತಿರುವ ವನವನ್ನು ಕಣ್ತುಂಬಿಕೊಂಡರು. ಅಷ್ಟೇ ಅಲ್ಲ, ಅಲ್ಲಿರುವ ಜನರಿಂದ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು.

ಪರಿಸರ ಪ್ರೇಮಿ ಮುರುಗೇಶ ಪಟ್ಟಣಶೆಟ್ಟಿ ಅವರಿಂದ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ಕ್ಯಾಂಪ್ ಕುರಿತು ಮಾಹಿತಿ ನೀಡುತ್ತಿರುವುದು

ಇದು ವಿಜಯಪುರ ನಗರದ ಹೊರವಲಯದ ಕರಾಡದೊಡ್ಡಿಯ ಬಳಿ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ. ಬರಕ್ಕೆ ಹೆಸರಾಗಿರುವ ವಿಜಯಪುರ ಜಿಲ್ಲೆ ಗಿಡಮರಗಳಿಗೂ ಬರ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಕಾಂಗ್ರೆಸ್ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲ ಕೋಟಿ ವೃಕ್ಷ ಅಭಿಯಾನ ಮಾಡುವ ಮೂಲಕ ಬಸವ ನಾಡಿನಲ್ಲಿ ಅರಣ್ಯ ಬೆಳೆಸುವ ಕ್ರಾಂತಿಗೂ ಕಾರಣರಾಗಿದ್ದಾರೆ.

ಮಾನವ ನಿರ್ಮಿತ ಅರಣ್ಯದಲ್ಲಿ ಪರಿಸರ ಪ್ರೇಮಿಗಳು ಹಾಕಿರುವ ಟೆಂಟ್ ಗಳು

ಶನಿವಾರ ಈ ಭಾಗದಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು. ಇದರ ಅಂಗವಾಗಿ ಡಾ. ಮಹಾಂತೇಶ ಬಿರಾದಾರ, ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಬಗಲಿ, ಅರಣ್ಯ ಮತ್ತು ಕೃಷಿ ವಿಜ್ಞಾನಿ ಚಂದ್ರಶೇಖರ ಬಿರಾದಾರ ಪ್ರಕೃತಿ ಮಡಿಲಿನಲ್ಲಿ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಒಂದು ದಿನ ಕಳೆಯಲು ಯೋಜನೆ ರೂಪಿಸಿದ್ದರು. ಅದರಂತೆ ಸುಮಾರು 60 ಜನರು 30 ಟೆಂಟ್ ಗಳಲ್ಲಿ ಶನಿವಾರ ಸಂಜೆಯಿಂದ ರವಿವಾರ ಮಧ್ಯಾಹ್ನದ ವರೆಗೆ ನಿಸರ್ಗದ ಮಡಿಲಿನಲ್ಲಿ ಕಾಲ ಕಳೆದರು.

ಕರಾಡದೊಡ್ಡಿ ಬಳಿ ಮಾನನವ ನಿರ್ಮಿತ ಅರಣ್ಯದಲ್ಲಿ ಟೆಂಟ್ ನೊಳಗೆ ಮಾಜಿ ಸಚಿವ ಎಂ. ಬಿ. ಪಾಟೀಲ, ಶ್ರೀ ಸಿದ್ದೇಶ್ವರ ಸ್ವಾಮೀಜಿ

ಈ ಪರಿಸರ ಪ್ರೇಮಿಗಳ ಕಾರ್ಯ ವೀಕ್ಷಿಸಲು ಬಂದಿದ್ದ ವಿಜಯಪುರ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಈ ಅರಣ್ಯ ಪ್ರದೇಶದಲ್ಲಿ ವಿಹಾರ ನಡೆಸಿದರು. ಪರಿಸರ ಪ್ರೇಮಿಗಳು ಹಾಕಿದ್ದ ಟೆಂಟ್ ಗಳನ್ನು ವೀಕ್ಷಿಸಿದರು. ಟೆಂಟ್ ನಲ್ಲಿ ಕುಳಿತು ಆ ಜಾಗವನ್ನು ಪವಿತ್ರಗೊಳಿಸಿದರು. ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಜಿಲ್ಲೆಯಲ್ಲಿರುವ ಮರಗಳ ಶೇಕಡಾವಾರು ಪ್ರಮಾಣ, ಕೋಟಿ ವೃಕ್ಷ ಅಭಿಯಾನದ ಪ್ರಗತಿ ಕುರಿತು ಮಾಹಿತಿ ನೀಡಿದರು.

ಕರಾಡದೊಡ್ಡಿ ಬಳಿ ಮಾನವ ನಿರ್ಮಿತ ಅರಣ್ಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಪರಿಸರದಲ್ಲಿ ರಾತ್ರಿ ಕಳೆದ ಪರಿಸರ ಪ್ರೇಮಿಗಳು

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿ ಬರದ ನಾಡಿನಲ್ಲಿ ಗಂಗೆ ಹರಿಯಲು ಕಾರಣರಾಗಿದ್ದಾರೆ. ಈಗ ಜಿಲ್ಲೆಯಲ್ಲಿ ಹಸಿರು ಕ್ರಾಂತಿಯನ್ನು ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದ್ದಾರೆ. ಇದನ್ನು ಎಲ್ಲರೂ ಬೆಳೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಅಲ್ಲದೇ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಈ ಮಾನವ ನಿರ್ಮಿತ ಕಾಡಿನಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಈ ಪ್ರದೇಶ ಗಿಡಮರಗಳಿಂದ ಸಮೃದ್ಧವಾಗಿ ಇತರರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.

Leave a Reply

ಹೊಸ ಪೋಸ್ಟ್‌