ವಿಜಯಪುರ: ರಾಜ್ಯದಲ್ಲಿ ಜನಮನ್ನಣೆ ಇಲ್ಲದ ಸರಕಾರ ಅಸ್ತಿತ್ವದಲ್ಲಿದ್ದುದರಿಂದ ಜನಪರ ಕಾರ್ಯಕ್ರಮಗಳನ್ನು ನೀಡಲು ಅಸಾಧ್ಯವಾಗಿದೆ ಎಂದು ಮಾಜಿ ಸಚಿವ ಎಚ್. ಸಿ. ಮಹಾದೇವಪ್ಪ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲ ನಾಯಕರಿಗೆ ಸಿಎಂ ಆಗಬೇಕು ಎನ್ನುವ ಬಯಕೆಯಿದೆ. ಮುಖ್ಯಮಂತ್ರಿ ಸ್ಥಾನ ಎಂದರೆ ಅದೇನು ಸಂತೆಯಲ್ಲಿ ಸಿಗುವ ಬದನೆಕಾಯಿನಾ? ಎಂದು ಸದ್ಯದ ರಾಜ್ಯದ ಬೆಳವಣಿಗೆ ಕುರಿತು ತೀಕ್ಷವಾಗಿ ಪ್ರತಿಕ್ರಿಯೆ ನೀಡಿದರು.
ಸಿಎಂ ಸ್ಥಾನ ಸಂವಿಧಾತ್ಮಕ ಹುದ್ದೆ. ಅದಕ್ಕೆ ಅದರದೇ ಆದ ಕಾನೂನು ಚೌಕಟ್ಟು, ಘನತೆ ಇದೆ. ಆ ಸ್ಥಾನಕ್ಕೇರಬೇಕಾದರೆ ವ್ಯಕ್ತಿತ್ವ ಚೆನ್ನಾಗಿರಬೇಕು. ಆಗ ಆ ಸ್ಥಾನದಲ್ಲಿ ಶೋಭೆ ಬರುತ್ತದೆ. ಸಂವಿಧಾನಾತ್ಮಕವಾಗಿ ಆಡಳಿತದ ಮೂಲಕ ಪ್ರಜಾತಂತ್ರದ ಕಾರ್ಯಕ್ರಮ ಮೂಲಕ ಇದು ಯಾವ ಹಿನ್ನೆಲೆಯಲ್ಲಿ ಇರದ ಅನೇಕ ಶಾಸಕರು ನಾನು ಸಿಎಂ ಆಗಬೇಕು. ಹಣ ಬಲ, ಜಾತಿ ಬಲ ಮತ್ತು ತೋಳ್ಬಲದ ಮೂಲಕ ರಾಜಕೀಯ ನಿಯಂತ್ರಣಕ್ಕೆ ಹೊರಟರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ಪ್ರಜಾಪ್ರಭುತ್ವ ಇಲ್ಲದೇ ಹೋದರೆ ಸಾಮಾನ್ಯರು ನಾಯಿಗಳ ರೀತಿ ಬದುಕಸಬೇಕಾಗುತ್ತದೆ ಎಂದು ಅವರು ಹೇಳಿದರು.
ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಿಂದುಳಿದ ಸಿಎಂ, ದಲಿತ ಸಿಎಂ ಎನ್ನುವದು ಇಲ್ಲಿ ಇಲ್ಲ. ಸಿಎಂ ಮಾಡುವದು ಆಯಾ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು. ಈಗ ಎಲ್ಲ ಪಕ್ಷಗಳು ದಲಿತರ ಮನಸ್ಸು ಒಡೆದು ಇವರು ಅಧಿಕಾರಕ್ಕೆ ಬರಬಾರದು ಎನ್ನುವದು ಎಲ್ಲ ಪಾರ್ಟಿಗಳ ಯೋಜನೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ವರ್ಷದ ಪ್ರವಾಹ ಸಂತ್ರಸ್ತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಬಜೆಟ್ ನಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಬಳಸದೇ ವಂಚಿಸಿದ್ದೇ ಈ ಸರಕಾರದ ಸಾಧನೆ ಎಂದು ಆರೋಪಿಸಿದ ಎಚ್. ಸಿ. ಮಹಾದೇವಪ್ಪ, ದೇಶದಲ್ಲಿ ಜನರ ಪ್ರತಿಕ್ರಿಯೆಗೂ ಅವಕಾಶ ನೀಡದೇ ಅವೈಜ್ಞಾನಿಕ ರೀತಿಯಲ್ಲಿ ಶಿಕ್ಷಣ ನೂತನ ನೀತಿ ಅನುಷ್ಠಾನಕ್ಕೆ ಮುಂದಾಗಿದೆ. ಇದು ಭವಿಷ್ಯದ ಭಾರತದ ಶೈಕ್ಷಣಿಕ ವ್ಯವಸ್ಥೆಗೆ ಬರೆ ಎಳೆಯುವ ಹಾಗೂ ಉಳ್ಳವರು ಮಾತ್ರ ಶಿಕ್ಷಣ ಪಡೆಯುವ ದುಸ್ಥಿತಿ ನಿರ್ಮಾಣದ ಕ್ರಮ ಎಂದು ಆರೋಪಿಸಿದರು.
ಕೋವಿಡ್ ಲಾಕಡೌನ್, ಸೀಲಡೌನ್ ಹೆಸರಿನಲ್ಲಿ ಬಡವರು, ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಎರಡನೇ ಅಲೆಯ ಸಿದ್ಧತೆಯಲ್ಲೂ ವಿಫಲವಾಗಿದ್ದರಿಂದ ಸರಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿ ವರ್ತನೆಯಿಂದ ದೇಶದಲ್ಲಿ ಜನತೆ ಆರ್ಥಿಕ ಸಂಕಷ್ಟ ಅನುಭವಿಸುವಂತಾಯ್ತು ಎಂದು ಟೀಕಿಸಿದರು. ಕೊರೊನಾ ಸಂಭವನೀಯ ಮೂರನೇ ಅಲೆಯ ಬಗ್ಗೆ ಸರಕಾರ ಇನ್ನಾದರೂ ಗಂಭೀರ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಸುನಿಲ ಉಕ್ಕಲಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಸುರೇಶ ಘೊಣಸಗಿ, ಸಂಗಪ್ಪ ಚಲವಾದಿ, ಬಸವರಾಜ ಬಾದಾಮಿ ಮುಂತಾದವರು ಉಪಸ್ಥಿತರಿದ್ದರು.