ಬೆಂಗಳೂರು: ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪರಮಾಪ್ತ ಮತ್ತು ಮಾಜಿ ಸಿಎಂ ದಿ. ಎಸ್. ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಸೂಚಿಸಿದರು. ಈ ಹೆಸರಿಗೆ ಮಾಡಿ ಡಿಸಿಎಂ ಗೋವಿಂದ ಕಾರಜೋಳ ಅನುಮೋದನೆ ನೀಡಿದರು.
ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ನೂತನ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಹೆಸರು ಘೋಷಣೆಯಾದ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ವೇದಿಕೆಗೆ ಆಹ್ವಾನಿಸಿದ ಮುಖಂಡರು ಶುಭ ಕೋರಿದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿದರು. ವೇದಿಕೆಯಲ್ಲಿದ್ದ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಕೇಂದ್ರ ವೀಕ್ಷಕರಾದ ಅರುಣಸಿಂಗ್, ಧರ್ಮೇಂದ್ರ ಪ್ರಧಾನ, ಕಿಶನರೆಡ್ಡಿ ಅವರು ನೂತನ ಸಿಎಂಗೆ ಶುಭ ಕೋರಿದರು.
ಬಳಿಕ ಮಾತನಾಡಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮನ್ನು ಸಿಎಂ ಆಗಿ ಆಯ್ಕೆಯಾಗಲು ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ, ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ತಮ್ಮನ್ನು ಬೆಂಬಲಿಸಿದ ಎಲ್ಲ ಬೆಂಬಲಿಸಿದ ಬಿಜೆಪಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಅಲ್ಲದೇ, ತಾವು ಸಿಎೞ ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ತಾವು ರೈತರು, ಬಡವರು, ಕೂಲಿ ಕಾರ್ಮಿಕರು, ದೀನ ದಲಿತರು, ಹಿಂದುಳಿದವರ ಅಭಿವೃದ್ಧಿಗಾಗಿ ಶ್ರಮಿಸುವೆ. ಕೊರೊನಾ ಮತ್ತು ಪ್ರವಾಹ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.
ನಾಳೆ ಬುಧವಾರ ನೂತನ ಸಿಎಂ, 3 ಜನ ಡಿಸಿಎಂ 15 ಜನ ಸಚಿವರಾಗಿ ಪ್ರಮಾಣ ವಚನ ನಿರೀಕ್ಷೆ
ಈ ಮಧ್ಯೆ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ನಾಳೆ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ನಾಳೆ ಮ. 3.20ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ. ಸಿಎಂ ಜೊತೆಯಲ್ಲಿ 3 ಜನ ಡಿಸಿಎಂ ಮತ್ತು 15 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ನಿರೀಕ್ಷೆಯಿದ್ದು, ಇವರಲ್ಲಿ ಅರ್ಧದಷ್ಟು ಜನ ವಲಸಿಗ ಮತ್ತು ಇನ್ನರ್ಧದಷ್ಟು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.