ಬೆಂಗಳೂರು: ಬಸವರಾಜ ಬೊಮ್ಮಾಯಿ ನಾಳೆ ಬುಧವಾರ ಬೆ. 11ಕ್ಕೆ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.
ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ, ಕೇಂದ್ರ ವೀಕ್ಷಕರಾದ ಅರುಣಸಿಂಗ್, ಧರ್ಮೇಂದ್ರ ಪ್ರಧಾನ, ಕಿಶನರೆಡ್ಡಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮಾಜಿ ಸಚಿವರಾದ ಆರ್. ಅಶೋಕ, ಸಿ. ಟಿ. ರವಿ, ಕೆ. ಎಸ್. ಈಶ್ವರಪ್ಪ ಮತ್ತೀತರರ ಜೊತೆ ರಾಜಭವನಕ್ಕೆ ತೆರಳಿದ ಬಸವರಾಜ ಬೊಮ್ಮಾಯಿ ಸರಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಇದಾದ ಬಳಿಕ ಕೂಡಲೇ ಸ್ಪಂದಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ನಾಳೆ ಬುಧವಾರ ಬೆ. 11ಕ್ಕೆ ಪ್ರಮಾಣ ವಚನ ಸ್ವೀಕಿಸುವಂತೆ ಆಹ್ವಾನ ನೀಡಿದ್ದಾರೆ.
ರಾಜ್ಯಪಾಲರ ಭೇಟಿಯ ಬಳಿಕ ಮಾತನಾಡಿದ ಭಾವಿ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ತಮ್ಮ ರಾಜಕೀಯ ಗುರು. ಅವರ ಮಾರ್ಗದರ್ಶನದಲ್ಲಿ ಬಡವರು, ದೀನ, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನಾಳೆ ಬುಧವಾರ ತಾವೊಬ್ಬರೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ನಂತರ ನಿರ್ಧರಿಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದರು.