ವಿಜಯಪುರ: ಕೊರೊನಾ ಹಿನ್ನೆಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಬೆಂಬಲಿಗರು ತಮ್ಮ ನಾಯಕನ ಜನ್ಮದಿನವನ್ನು ಜನೋಪಯೋಗಿಯಾಗಲು ಬಳಸಿಕೊಂಡಿದ್ದಾರೆ.
ವಿಜಯಪುರ ನಗರ ಮಾಜಿ ಶಾಸಕರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸದೇ, ರೋಗಿಗಳಿಗೆ ಅಗತ್ಯವಾಗಿರುವ ರಕ್ತವನ್ನು ಸಂಗ್ರಹಿಸುವ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ಬಹುತೇಕ ಕಡೆಗಳಲ್ಲಿ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ರಕ್ತದಾನಿಗಳೂ ಸಿಗುತ್ತಿಲ್ಲ.
ಕೆಲವರು ಕೊರೊನಾ ಸೋಂಕಿತರಾಗಿ ರಕ್ತ ನೀಡಲು ಸಾಧ್ಯವಾಗದ ಹಿನ್ನೆಲೆ ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಹಲವರು ಕೊರೊನಾಕ್ಕೆ ಹೆದರಿ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಬೇರೆ ಕಾಯಿಲೆಗಳಿಗೆ ರಕ್ತದ ತುರ್ತು ಅವಶ್ಯಕತೆ ಇರುವವರು ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಪರದಾಡುವಂತಾಗಿದೆ. ಅಷ್ಟೇ ಅಲ್ಲ, ವೃತ್ತಿಪರ ರಕ್ತದಾನಿಗಳೂ ಕೂಡ ಈಗ ಮುಂಚೆಯಂತೆ ನಿರ್ಭೀತಿಯಿಂದ ರಕ್ತ ನೀಡಲು ಹಿಂಜರಿಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಪ್ಪು ಪಟ್ಟಣಶೆಟ್ಟಿ ಅವರ ಬೆಂಬಲಿಗರು ವಿಜಯಪುರ ನಗರದ ಅದೃಷ್ಠ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ನಡೆಸಿದರು. ಈ ಸಂದರ್ಭದಲ್ಲಿ 60 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ಅಷ್ಟೇ ಅಲ್ಲ, ಕೊರೊನಾದಿಂದ ಸಂತ್ರಸ್ತರಾಗಿರುವ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಕರಿಗೆ ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಿದರು. ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಮತ್ತು ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಬ್ಯಾಂಕಿನ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮುಂತಾದವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.